
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ವಿಶ್ವದಲ್ಲಿ ಒಂದು ರೀತಿ ಸಂದಿಗ್ಧ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಹಾಗೂ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೇಳಿದರು.‘ಇಂದಿನ ವೇಗದ ಬದುಕಿನಲ್ಲಿ ಜಗತ್ತು ಒಂದು ಹಳ್ಳಿಯಾಗಿದ್ದು, ರಾಷ್ಟ್ರ ರಾಷ್ಟ್ರಗಳು ಒಂದಕ್ಕೊಂದು ಅವಲಂಬಿತವಾಗಿ ಬದುಕು ನಡೆಸುವಂತಾಗಿದೆ. ಆದ್ದರಿಂದ ಇಡೀ ವಿಶ್ವದಲ್ಲಿ ಶಾಂತಿ ನೆಲೆಸುವಂತಾಗಬೇಕು. ಅದಕ್ಕೆ ಮಹಾವೀರರ ಸಂದೇಶಗಳು ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯುವಂತಾಗಬೇಕು ಎಂದು ವಾಣಿ ಪುಷ್ಪರಾಜ್ ಅವರು ಪ್ರತಿಪಾದಿಸಿದರು.’
ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಜನಿಸಿರುವ ಭಗವಾನ್ ಮಹಾವೀರರು 12 ವರ್ಷಗಳ ಕಠಿಣ ತಪಸ್ಸಿನ ನಂತರ ಸರ್ವ ಜ್ಞಾನ ಪಡೆದು ಪ್ರತಿಯೊಂದು ಜೀವಿಗಳ ಉದ್ಧಾರಕ್ಕೆ ಅಹಿಂಸಾ ಮಾರ್ಗವನ್ನು ಬೋಧಿಸಿದರು ಎಂದು ಹೇಳಿದರು.
ಅಹಿಂಸೆಯ ಪರಮಧರ್ಮ ಪ್ರತಿಯೊಂದು ಜೀವಿಯೂ ಮನುಷ್ಯ, ಪ್ರಾಣಿ, ಸಸ್ಯ, ಸಮಾನವಾದುದು ಮತ್ತು ಎಲ್ಲದರಲ್ಲೂ ಆತ್ಮವಿದೆ. ಆದ್ದರಿಂದ ಯಾವ ಪ್ರಾಣಿ, ಪಕ್ಷಿಗೂ ಹಿಂಸೆ ನೀಡಬಾರದು ಎಂದು ಮಹಾವೀರರು ಪ್ರತಿಪಾದಿಸಿದ್ದಾರೆ ಎಂದು ಅವರು ನುಡಿದರು.
ಜೈನ ಸಮಾಜದ ಅಲ್ಪಸಂಖ್ಯಾತರ ವಿಭಾಗದ ಸದಸ್ಯರಾದ ಜೆ.ಎನ್.ಚಂದ್ರಪ್ರಸಾದ್ ಅವರು ಮಾತನಾಡಿ ಭಗವಾನ್ ಮಹಾವೀರರು ಜೈನಧರ್ಮದ 24ನೇ ಮತ್ತು ಕೊನೆಯ ತೀರ್ಥಂಕರರಾಗಿದ್ದು, ಮಹಾವೀರರು ಹಾಕಿಕೊಟ್ಟ ಸತ್ಯದ ಮಾರ್ಗದಲ್ಲಿ ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಜೈನ ಸಮಾಜದ ಜಿಲ್ಲಾಧ್ಯಕ್ಷರಾದ ಜೆ.ಎನ್.ಪುಷ್ಪರಾಜ್ ಅವರು ಮಾತನಾಡಿ ಭಗವಾನ್ ಮಹಾವೀರರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ಪ್ರಪಂಚದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಆ ನಿಟ್ಟಿನಲ್ಲಿ ಭಗವಾನ್ ಮಹಾವೀರರ ಚಿಂತನೆ ಮತ್ತು ಮಾರ್ಗದರ್ಶನಗಳು ಪ್ರಸ್ತುತ ದಿನದಲ್ಲಿ ಹಿಂದಿಗಿಂತ ಇಂದು ಅತ್ಯಗತ್ಯವಾಗಿದೆ ಎಂದು ಅವರು ನುಡಿದರು.