ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಪೂಂಜಾಲಕಟ್ಟೆ ಶ್ರೀರಾಮಾಂಜನೆಯ ಭಜನಾಮಂದಿರ ದ ಬಳಿಯ ತಿರುವಿನಲ್ಲಿ ನಡೆದಿದೆ.
ಘಟನೆ ವಿವರ: ಲಾರಿಯಲ್ಲಿ ಶಾಮಿಯಾನದ ಸಾಮಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಮಂದಿರದ ಬಳಿ ತಿರುವಿನಲ್ಲಿ ಲಾರಿಯನ್ನು ಚಾಲಕ ಉಮ್ಮರ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಜಖಂಗೊಂಡಿದೆ. ಲಾರಿ ಮಗುಚಿ ಬಿದ್ದು ಲಾರಿಯಲ್ಲದ್ದ ಚಾಲಕ ಉಮರ್, ಕೆಲಸದವರಾದ ಅಖಿಲೇಶ್ ಮತ್ತು ಕಾರ್ತಿಕ್ ಸಿಲುಕಿದ್ದರು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮನೀಶ್ ಹಾಗೂ ಸಂದೀಪ್ ಎಂಬವರು ಅಪಘಾತದಿಂದ ಕಚ್ಛಾ ಮಣ್ಣು ರಸ್ತೆಯ ಬದಿಯಲ್ಲಿ ಬಿದ್ದ ಪರಿಣಾಮ ಅವರಿಗೆ ರಕ್ತಗಾಯವಾಗಿರುತ್ತದೆ. ಲಾರಿಯಲ್ಲಿ ಸಿಲುಕಿದ್ದವರನ್ನು ಹೊರತರಲು ಸ್ಥಳೀಯ ಯುವಕರು ಹರಸಾಹಸ ಪಡಬೇಕಾಯಿತು. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಕಾರ್ತಿಕ್ ಮೃತಪಟ್ಟಿರುವುದಾಗಿ ತಿಳಿಸಿದರು. ಗಾಯಾಳುಗಳನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.