ಕನ್ನಡಪ್ರಭ ವಾರ್ತೆ ಬೆಂಗಳೂರು
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ಬೆಂಬಲಿಸಿ ಇಲ್ಲಿನ ಯಶವಂತಪುರದಲ್ಲಿರುವ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್, ಕಂಠೀರವ ನಗರದ ಟರ್ಮಿನಲ್‌ಗಳಲ್ಲಿ ಸಾವಿರಾರು ಲಾರಿಗಳು ನಿಂತಿವೆ. ಜೈ ಕರ್ನಾಟಕ ಲಾರಿ ಮಾಲೀಕರ ಸಂಘ, ಬೆಂಗಳೂರು ಲಾರಿ ಮಾಲೀಕರ ಸಂಘಗಳು ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿವೆ.
ನಗರಕ್ಕೆ ಹಾಲು, ಇಂಧನ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತರುವ ಲಾರಿಗಳನ್ನು ಹೊರತುಪಡಿಸಿ ಇನ್ನಾವುದೇ ಲಾರಿಗಳೂ ಬಂದಿಲ್ಲ. ನಗರದ ಹೊರವಲಯದಲ್ಲೂ ಲಾರಿಗಳು ನಿಂತ ಪರಿಣಾಮ ಸರಕುಗಳು ಒಳಗೆ ಬರುತ್ತಿಲ್ಲ, ಹೊರ ಊರುಗಳಿಗೂ ಹೋಗುತ್ತಿಲ್ಲ. ಮೊದಲ ದಿನ ಜನಸಾಮಾನ್ಯರಿಗೆ ಮುಷ್ಕರ ಅಷ್ಟೊಂದು ಬಿಸಿ ಮುಟ್ಟದಿದ್ದರೂ ಧರಣಿ ಮುಂದುವರಿದರೆ ತೊಂದರೆಯಾಗುವ ಸಾಧ್ಯತೆಯಿದೆ.ವೈಟ್‌ಫೀಲ್ಡ್‌ನಲ್ಲಿರುವ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್‌ನಲ್ಲಿ ಮೂರು ರೈಲುಗಳು ಸರಕುಗಳನ್ನು ಅನ್‌ಲೋಡ್ ಮಾಡಲಾಗದೆ ಹಳಿಯಲ್ಲೇ ನಿಂತಿವೆ. ಅದರ ಜೊತೆಗೆ ಮಾಲೂರಿನ ಬಳಿಯೂ ಸರಕು ಸಾಗಣೆ ರೈಲು ನಿಂತಿದೆ. ಗೊಬ್ಬರ, ಗೋಧಿ, ಆಲೂಗಡ್ಡೆ ಸೇರಿ ಇತರ ಸರಕುಗಳು ಇದರಲ್ಲಿವೆ. ನೈಋತ್ಯ ರೈಲ್ವೆ ಬೆಂಗಳೂರು ವಲಯದಿಂದ ಲಾರಿ ಅಸೋಸಿಯೇಶನ್ ಜೊತೆ ಮಾತನಾಡಿ ಸರಕು ಅನ್‌ಲೋಡ್ ಮಾಡಲು ಮನವಿ ಮಾಡಲಾಗಿದ್ದು ಈ ಕುರಿತು ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ತಿಳಿಸಿದರು.
‘ಕನ್ನಡಪ್ರಭ’ ಜೊತೆ ಮಾತನಾಡಿದ ಬೆಂಗಳೂರು ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಬಿ.ಚೆನ್ನಾರೆಡ್ಡಿ, ಗುರುವಾರ ಶೇ.80ರಷ್ಟು ಲಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದವು. ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಲಾರಿ ಮಾಲೀಕರ ಸಂಘಗಳು ನಮಗೆ ಬೆಂಬಲ ನೀಡಿವೆ. ಶುಕ್ರವಾರದಿಂದ ಮುಷ್ಕರ ಇನ್ನಷ್ಟು ಜೋರಾಗಿ ನಡೆಯಲಿದ್ದು, ಹೆಚ್ಚಿನವರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.