ಕನ್ನಡಪ್ರಭ ವಾರ್ತೆ, ದಾವಣಗೆರೆ
ಇಟ್ಟಿಗೆ ಭಟ್ಟಿಯಲ್ಲಿ ನಿಲ್ಲಿಸಿದ್ದ 10 ಲಕ್ಷ ಮೌಲ್ಯದ ಭಾರತ್ ಬೆಂಜ್ ಕಂಪನಿಯ ಲಾರಿ ಕಳವು ಮಾಡಿದ್ದ ಪ್ರಕರಣವನ್ನು ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಬೇಧಿಸಿ, ಆರೋಪಿಯನ್ನು ಲಾರಿ, 1 ಬೈಕ್ ಸಮೇತ ಬಂಧಿಸುವಲ್ಲಿ ಜಿಲ್ಲೆಯ ಮಲೆಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾ. ಗುಡ್ಡದ ಕಮಲಾಪುರ ಗ್ರಾಮದ ವಾಸಿ, ಚಾಲಕನ ವೃತ್ತಿಯ ಕೃಷ್ಣಪ್ಪ ಅಲಿಯಾಸ್ ಕೃಷ್ಣಪ್ಪ ಮಲ್ಲೂರು ಬಂಧಿತ ಆರೋಪಿ. ಹರಿಹರ ತಾ. ಕಡರ ನಾಯಕನಹಳ್ಳಿ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ನಿಲ್ಲಿಸಿದ್ದ ಸುಮಾರು 10 ಲಕ್ಷ ರು. ಮೌಲ್ಯದ ಭಾರತ್ ಬೆಂಜ್ ಕಂಪನಿಯ ಲಾರಿಯನ್ನು ಮೇ.31ರ ರಾತ್ರಿ 8ರಿಂದ ಜೂ.1ರ ಬೆಳಿಗ್ಗೆ 6 ಗಂಟೆ ಅವದಿಯಲ್ಲಿ ಕಳವು ಮಾಡಲಾಗಿತ್ತು. ಲಾರಿ ಮಾಲೀಕರು ಈ ಬಗ್ಗೆ ಮಲೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಸಿದ್ದನಗೌಡ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ, ಪಿಎಸ್ಐ ಎಸ್ಐ ಪ್ರಭು ಡಿ.ಕೆಳಗಿನ ಮನಿ ನೇತೃತ್ವದಲ್ಲಿ ರಟ್ಟಿಹಳ್ಳಿ ತಾ. ಗುಡ್ಡದ ಕಮಲಾಪುರ ಗ್ರಾಮದ ಆರೋಪಿ, ಚಾಲಕ ಕೃಷ್ಣಪ್ಪ ಅಲಿಯಾಸ್ ಕೃಷ್ಣಪ್ಪ ಮಲ್ಲೂರುನನ್ನು ಬಂಧಿಸಲಾಯಿತು. ಬಂಧಿತನಿಂದ 10 ಲಕ್ಷ ಮೌಲ್ಯದ ಲಾರಿ, ರಾಣೆಬೆನ್ನೂರು ಠಾಣೆ ವ್ಯಾಪ್ತಿಯ 1 ಬೈಕ್ ಕಳವು ಪ್ರಕರಣ ಬೇಧಿಸಿ, 20 ಸಾವಿರ ಮೌಲ್ಯದ ಬೈಕ್ ಸಹ ಜಪ್ತು ಮಾಡಲಾಗಿದೆ. ಬಂಧಿತ ಆರೋಪಿ ಕೃಷ್ಣಪ್ಪ ಮಲ್ಲೂರುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬ್ಬಂದಿಯಾದ ಲಕ್ಷ್ಮಣ, ರಾಜಶೇಖರ, ಸಂತೋಷಕುಮಾರ, ಮಲ್ಲಿಕಾರ್ಜುನ, ಜೀಪು ಚಾಲಕರಾದ ರಾಜಪ್ಪ, ಮುರುಳೀಧರ ಆರೋಪಿಗೆ ಬಂಧಿಸಿದ ತಂಡದಲ್ಲಿದ್ದರು.