ಹುಬ್ಬಳ್ಳಿ:
ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ಹಳೇಹುಬ್ಬಳ್ಳಿ ಇಂಡಿಪಂಪ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರೆ, ವಿದ್ಯಾನಗರದ ಶಿರೂರ್ ಪಾರ್ಕ್ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.ಇಲ್ಲಿನ ಶಿರೂರ್ ಪಾರ್ಕ್ ರಸ್ತೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಕೊಲೆ ಆರೋಪಿ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಕೊಲೆಗಡುಕರಿಗೆ ರಕ್ಷಣೆ ನೀಡಲು ಮುಂದಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ವೃತ್ತದ ಮಧ್ಯ ಧರಣಿ ಕುಳಿತು, ನ್ಯಾಯಕ್ಕಾಗಿ ಆಗ್ರಹಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಲವ್ ಜಿಹಾದ್, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ನಾವು ಹೋರಾಟ ಆರಂಭಿಸಿದ್ದೇವೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿಕೆ ಗಮನಿಸಿದರೆ ಪ್ರಕರಣ ದಿಕ್ಕು ತಪ್ಪುವ ಸಾಧ್ಯತೆ ಕಂಡು ಬರುತ್ತಿದೆ. ನೇಹಾ ತಂದೆ ನಿರಂಜನ ಹಿರೇಮಠ ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯಾವ ಜನಾಂಗಕ್ಕೂ ಹಿಂಸೆ ನೀಡಿಲ್ಲ. ಆದರೆ, ಸಮಾಜಘಾತುಕ ಶಕ್ತಿಯನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಮುಖ್ಯಮಂತ್ರಿ ಅವರೇ ಹಿಂದೂಗಳನ್ನು ಹಿಂಸಿಸುತ್ತಿದ್ದಾರೆ. ಬೇರೆ ಕೋಮಿನವರು ಕೊಲೆಯಾಗಿದ್ದರೆ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದರು. ಹಿಂದೂ ಹುಡುಗಿ ಕೊಲೆಯಾಗಿದ್ದಕ್ಕೆ ಅವರು ಬಂದಿಲ್ಲ ಎಂದು ಆರೋಪಿಸಿದರು.ಅಂಗಡಿ ಬಂದ್:
ನೇಹಾ ಕೊಲೆ ಖಂಡಿಸಿ ಸೋಮವಾರ ಬಿಜೆಪಿಯಿಂದ ನಡೆದ ಪ್ರತಿಭಟನೆಗೆ ಹಲವು ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಬಂದ್ ಮಾಡಿದ್ದರು. ಇನ್ನು ಕೆಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸ್ಪಂದಿಸುವಂತೆ ಮನವಿ ಮಾಡಿ ಅಂಗಡಿಗಳನ್ನು ಬಂದ್ ಮಾಡಿಸಿದರು.ಈ ವೇಳೆ ಶಿವು ಮೆಣಸಿನಕಾಯಿ, ನಾರಾಯಣ ಜರತಾರಘರ, ಪ್ರಭು ನವಲಗುಂದಮಠ, ಅನೂಪ್ ಬಿಜವಾಡ, ರಾಧಾಬಾಯಿ ಸಫಾರೆ, ರಾಜು ಜರತಾರಘರ, ಜಗದೀಶ ಬುಲ್ಲಣ್ಣವರ, ಜಗದೀಶ ಲಾಳಗೆ, ದೀಪಕ ಲಾಳಗೆ, ಸವಿತಾ ಚವ್ಹಾಣ, ಲಕ್ಷ್ಮಿಕಾಂತ ಗೋಡಕೆ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.