ಕನ್ನಡಪ್ರಭ ವಾರ್ತೆ ತುರುವೇಕೆರೆ
ನಮ್ಮ ಹೆತ್ತಮ್ಮನನ್ನು ಪ್ರೀತಿಸಿ, ಗೌರವಿಸುವಂತೆ ನಮ್ಮ ಉಸಿರಾಗಿರುವ ನಮ್ಮ ನಾಡು, ನುಡಿಯನ್ನೂ ಪ್ರೀತಿಸಿ, ಗೌರವಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕೇವಲ ಭಾಷೆ, ಬರವಣಿಗೆಯಷ್ಟೇ ಅಲ್ಲ. ಅದು ಇಡೀ ಕನ್ನಡ ನಾಡಿನ ಜನತೆಯ ಜೀವನ ಕ್ರಮ. ಜೊತೆಗೆ ಕನ್ನಡ ಭಾಷೆ ನಾಡಿನ ಪರಂಪರೆ, ಸಂಸ್ಕೃತಿಯ ಪ್ರತೀಕ ಎಂದರು.
ಯಾವುದೇ ರಾಜ್ಯ ಹಾಗೂ ರಾಷ್ಟ್ರೀಯ ಹಬ್ಬಗಳು ಕೇವಲ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಸೀಮಿತವಾಗದೇ ಸಮಸ್ತ ನಾಡಿನ ಜನತೆಯ ಹಬ್ಬವಾಗಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಎಸ್.ಬಿ.ಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಬಿ.ಚಂದ್ರಶೇಖರ್ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಸಾಕಷ್ಟು ಹೋರಾಟಗಾರರು ಪರಿಶ್ರಮಪಟ್ಟಿದ್ದಾರೆ. ಅಂತಹ ಸಾಧಕರನ್ನು ನಾವೆಲ್ಲ ಸ್ಮರಿಸಬೇಕಿದೆ. ಕನ್ನಡ ನಾಡು ತ್ಯಾಗ, ಭೋಗ ಮತ್ತು ಸ್ವರ್ಗಕ್ಕೆ ಸಮಾನವಾಗಿದೆ. ರಾಜ್ಯದ ೭.೫ ಕೋಟಿ ಜನತೆಯಲ್ಲಿ ಕೇವಲ ೪.೫ ಕೋಟಿ ಜನ ಮಾತ್ರ ಕನ್ನಡ ಮಾತನಾಡುತ್ತಿರುವುದು ದುರಾದೃಷ್ಟಕರ. ದಿನ ಕ್ರಮೇಣ ಅನ್ಯಭಾಷಿಗರ ಸಂಖ್ಯೆಯೇ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಸಾಪ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯ ಟಾಪರ್ ಗಳನ್ನು ಅಭಿನಂದಿಸಲಾಯಿತು.ನಂತರ ತಾಲೂಕಿನ ವಿವಿಧ ಕ್ಷೇತ್ರಗಳ ೯ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಗಣ್ಯರು ಭುವನೇಶ್ವರಿ ಭಾವಚಿತ್ರದೊಂದಿಗೆ ಪಥ ಸಂಚಲನ ನಡೆಸಿದರು. ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮೆಚ್ಚುಗೆ ಪಡೆಯಿತು.
ಸಮಾರಂಭದಲ್ಲಿ ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ರವರು ರಾಷ್ಟ್ರಧ್ವಜರೋಹಣ ನೆರವೇರಿಸಿದರೆ, ಶಾಸಕ ಎಂ.ಟಿ.ಕೃಷ್ಣಪ್ಪನವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಇಒ ಶಿವರಾಜಯ್ಯ, ಬಿಇಒ ಎನ್. ಸೋಮಶೇಖರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ಪಪಂ ಅಧ್ಯಕ್ಷೆ ಆಶಾರಾಣಿ ರಾಜಶೇಖರ್, ಉಪಾಧ್ಯಕ್ಷೆ ಭಾಗ್ಯಮ್ಮ ಮಹೇಶ್, ಸದಸ್ಯರಾದ ಜಯ್ಯಮ್ಮ, ಎನ್.ಆರ್.ಸುರೇಶ್, ಚಿದಾನಂದ್, ಮಧು, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಬಾಬು, ಸಹಾಯಕ ಕೃಷಿ ನಿರ್ದೇಶಕಿ ಪೂಜಾ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಆಂಜನೇಯರೆಡ್ಡಿ, ಡಾ.ರಂಗನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್ ಸೇರಿ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.