ನಾಡಿನ ಸಂಸ್ಕೃತಿ, ಇತಿಹಾಸದ ಅಭಿಮಾನವಿರಲಿ: ಪೂಜಾಗಾಂಧಿ

KannadaprabhaNewsNetwork | Published : Dec 10, 2024 12:33 AM

ಸಾರಾಂಶ

ದೇಶಪ್ರೇಮ ವಿಶ್ವಶಾಂತಿಗೆ ವಿರುದ್ಧವಲ್ಲ. ಇವು ವಿಶ್ವಶಾಂತಿಗೆ ಪೂರಕವಾಗಿವೆ. ಉಳಿದ ಭಾಷೆಗಿಂತ ಕನ್ನಡವೇ ಮೇಲು. ಕನ್ನಡತನ, ಸಂಸ್ಕೃತಿ ಎಂದೂ ಬಿಡಬಾರದು. ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದರೂ ಕನ್ನಡದ ಮೇಲೆ ತುಂಬಾ ಪ್ರೀತಿಯಿದೆ.

ಶಿರಸಿ: ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಗೌರವ, ಅಭಿಮಾನ ಇಟ್ಟುಕೊಳ್ಳಬೇಕು ಎಂದು ಚಿತ್ರನಟಿ ಪೂಜಾ ಗಾಂಧಿ ತಿಳಿಸಿದರು.ಭಾನುವಾರ ರಾತ್ರಿ ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಆಯೋಜಿಸಿದ್ದ ೧೩ನೇ ನಮ್ಮನೆ ಹಬ್ಬ ಉದ್ಘಾಟಿಸಿ, ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಿಶ್ವಶಾಂತಿ ಸರಣಿಯ ನೂತನ ಯಕ್ಷರೂಪಕ ವಿಶ್ವಾಭಿಗಮನಮ್ ಲೋಕಾರ್ಪಣೆಗೊಳಿಸಿ, ಮಾತನಾಡಿದರು. ದೇಶಪ್ರೇಮ ವಿಶ್ವಶಾಂತಿಗೆ ವಿರುದ್ಧವಲ್ಲ. ಇವು ವಿಶ್ವಶಾಂತಿಗೆ ಪೂರಕವಾಗಿವೆ. ಉಳಿದ ಭಾಷೆಗಿಂತ ಕನ್ನಡವೇ ಮೇಲು. ಕನ್ನಡತನ, ಸಂಸ್ಕೃತಿ ಎಂದೂ ಬಿಡಬಾರದು. ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದರೂ ಕನ್ನಡದ ಮೇಲೆ ತುಂಬಾ ಪ್ರೀತಿಯಿದೆ ಎಂದರು.

ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಮಾತನಾಡಿ, ಹಳ್ಳಿಯಲ್ಲಿ ಕೃಷಿ ಸೇರಿದಂತೆ ಸಾಕಷ್ಟು ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಹಳ್ಳಿಯ ಯುವಕರು ದೇಶ, ವಿದೇಶಗಳಿಗೆ ವಲಸೆ ಹೋಗುತ್ತಿದ್ದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ನಾವು ಜಗತ್ತನ್ನು ಸುತ್ತಬೇಕು. ಅಲ್ಲಿನ ಉತ್ಕೃಷ್ಟತೆಯನ್ನು ಗ್ರಹಿಸಿ ನಮ್ಮ ಬೇರಿಗೆ ನೀಡಬೇಕು. ಆದರೆ ಇಲ್ಲಿಂದ ಹೋದವರು ನಮ್ಮ ಮೂಲ ಬೇರನ್ನು ಮರೆಯಬಾರದು ಎಂದರು.

ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮೆರೆಯುತ್ತಿರುವ ಕಾಲವಿದು. ಯಕ್ಷಗಾನವನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಅದ್ಭುತವಾಗಿ ಪ್ರಸ್ತುಪಡಿಸಬಹುದು. ಆದರೆ ಬೌದ್ಧಿಕ, ಜಾಣ್ಮೆ ಮೈಗೂಡಿಸಿಕೊಳ್ಳುವ ಈ ಪ್ರಭೆಯಿಂದ ಸಾತ್ವಿಕ ಅಭಿನಯ ಸಾಧ್ಯವಿಲ್ಲ ಎಂದರು. ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಮಾತನಾಡಿ, ವಿಶ್ವದಲ್ಲಿ ಮನೆ- ಮನಗಳಲ್ಲಿ ಅಶಾಂತಿ ನೆಲೆಸಿದೆ. ನಮಗೆ ಶಾಂತಿ ಬೇಕಾಗಿದ್ದು, ಅರಸುತ್ತಿದ್ದೇವೆ. ಶಾಂತಿಯ ಉಪಾಯ ಅನ್ವೇಷಣೆ ಮಾಡುತ್ತಿದ್ದೇವೆ. ಶಾಂತಿಗೆ ಮನಸ್ಸನ್ನು ಕಟ್ಟುವ ಕೆಲಸ ಮಾಡಬೇಕು ಎಂದರು. ನಮ್ಮನೆ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಜಗತ್ತಿನ ವಿಧೆಡೆ ಭಾರತೀಯರ ಮೇಲೆ ದಾಳಿ ನಡೆಯುತ್ತಿದೆ. ಆದರೆ ನಾಡಿನ ಬೆಟ್ಟಕೊಪ್ಪದಂತಹ ಹಳ್ಳಿಯಿಂದ ವಿಶ್ವಶಾಂತಿಯ ಪ್ರಸಾರ ಮಾಡುತ್ತಿದ್ದೇವೆ. ನಾಡು, ದೇಶದ ಸಮೃದ್ಧಿಯಾಗಲಿ, ಶಾಂತಿ, ನೆಮ್ಮದಿಯಿಂದ ಜನ ಬದುಕುವಂತಾಗಲಿ ಎಂದರು. ಪ್ರಶಸ್ತಿ ಪುರಸ್ಕೃತ ಅವಿನಾಶಿ ಸಂಸ್ಥೆ ಸ್ಥಾಪಕ ಅಣ್ಣಾರಾಯ ತಳವಾರ ಅವರು, ನಮ್ಮನೆ ಹಬ್ಬ ನಾಡು, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಬೆಳಗಲಿ ಎಂದರು. ಯುವ ಪುರಸ್ಕಾರಕ್ಕೆ ಭಾಜನರಾದ ಯುವ ಗಾಯಕಿ ಐಶ್ವರ್ಯ ದೇಸಾಯಿ ಧಾರವಾಡ ಮಾತನಾಡಿದರು. ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಹಿರಿಯ ಪರ್ತಕರ್ತ ರವೀಂದ್ರ ಭಟ್ಟ ಅಧ್ಯಕ್ಷತೆ ವಹಿಸಿ, ನಮ್ಮನೆ ಹಬ್ಬ ಆಚರಣೆ, ಅದರ ಹಿಂದಿನ ಆಶಯ ವಿವರಿಸಿ, ಎಲ್ಲರೂ ನಮ್ಮವರು ಎಂಬ ಉದಾತ್ತ ಚಿಂತನೆಯ ಹಬ್ಬ ಎಂದರು.

ರಾಘವೇಂದ್ರ ಸಕಲಾತಿ ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ತುಳಸಿ ಹೆಗಡೆ, ವಿನಾಯಕ ಕೋಡ್ಸರ, ವಿನಯ ಹೊಸ್ತೋಟ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ಭಾಗ್ವತ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ನಿರೂಪಿಸಿದರು. ಉಪಾಧ್ಯಕ್ಷ ರಮೇಶ ಹಳೆಕಾನಗೋಡ ವಂದಿಸಿದರು. ಇದೇ ವೇದಿಕೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೇಶವ ಹೆಗಡೆ ಕೊಳಗಿ ಅವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.

Share this article