ಮದುವೆ ಆಗು ಎಂದು ಪೀಡಿಸಿದ್ದಕ್ಕೆಪ್ರೇಯಸಿ ಕೊಂದ ಪ್ರಿಯತಮ ಸೆರೆ

KannadaprabhaNewsNetwork |  
Published : Sep 18, 2026, 03:45 AM IST
champu das | Kannada Prabha

ಸಾರಾಂಶ

ವಿವಾಹವಾಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ಫ್ಯಾನ್‌ಗೆ ಆಕೆಯ ಮೃತದೇಹವನ್ನು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ ಪ್ರಿಯಕರನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿವಾಹವಾಗುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ಫ್ಯಾನ್‌ಗೆ ಆಕೆಯ ಮೃತದೇಹವನ್ನು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ ಪ್ರಿಯಕರನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಮುನ್ನದಾಸ್‌ (32) ಬಂಧಿತ. ಆರೋಪಿ ತನ್ನ ಪ್ರೇಯಸಿ ಚಂಪುದಾಸ್‌ (24) ಎಂಬಾಕೆಯನ್ನು ಆ.30ರಂದು ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಮುನ್ನದಾಸ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಚಂಪುದಾಸ್‌ಗೂ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಆದರೂ ಆರೋಪಿ, ಚಂಪುದಾಸ್‌ಳನ್ನು ಪುಸಲಾಯಿಸಿ ಅಸ್ಸಾಂನಿಂದ ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಕರೆತಂದು ನಾಗನಾಥಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆಯಾಗುವಂತೆ ಪೀಡಿಸಿದಕ್ಕೆ ಹತ್ಯೆ:

ಚಂಪುದಾಸ್‌ಳನ್ನು ಕರೆತಂದಿದ್ದ ಆರೋಪಿಯು ಆಕೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಆರೋಪಿಯು ಅಸ್ಸಾಂನಲ್ಲಿರುವ ತನ್ನ ಪತ್ನಿ ಜತೆ ಫೋನಲ್ಲಿ ಹೆಚ್ಚು ಮಾತನಾಡುತ್ತಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಚಂಪುದಾಸ್‌, ನನ್ನನ್ನು ನೀನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಿನ್ನ ನಂಬಿ ಇಡೀ ಕುಟುಂಬ ಬಿಟ್ಟು ಬಂದಿದ್ದೇನೆ. ನನಗಿಂತ ನಿನ್ನ ಪತ್ನಿಗೆ ಹೆಚ್ಚು ಸಮಯ ಕೊಡುತ್ತಿಯಾ? ಕೂಡಲೇ ಪತ್ನಿಯನ್ನು ಬಿಟ್ಟು, ನನ್ನ ಮದುವೆ ಮಾಡಿಕೊಳ್ಳಬೇಕು ಎಂದು ಪೀಡಿಸುತ್ತಿದ್ದಳು. ಅದರಿಂದ ಕೋಪಗೊಂಡ ಆರೋಪಿ, ಆ.30ರಂದು ಉಸಿರಗಟ್ಟಿಸಿ ಹತ್ಯೆಗೈದು, ಬಳಿಕ ಮನೆಯ ಫ್ಯಾನ್‌ಗೆ ಮೃತದೇಹವನ್ನು ನೇಣು ಹಾಕಿ ಪರಾರಿಯಾಗಿದ್ದ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ಮೊದಲಿಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ಬಯಲು:

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮಹಿಳೆಯನ್ನು ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ ಎಂದು ಉಲ್ಲೇಖವಿತ್ತು. ನಂತರ ಸ್ಥಳೀಯರ ವಿಚಾರಣೆ ನಡೆಸಿದಾಗ, ಚಂಪುದಾಸ್ ಮತ್ತು ಮುನ್ನದಾಸ್‌ ಸದಾ ಜಗಳ ಮಾಡಿಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ರಾಯಸಂದ್ರದ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ನಿ ಮೇಲೆ ಭೀಕರ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ!
5 ಕಿಮೀ ಕ್ರಮಿಸಲು ಬಸ್ಸಲ್ಲಿ 2 ತಾಸು ಪ್ರಯಾಣ!