ವಿಚ್ಛೇದಿತೆಯನ್ನು ಹತ್ಯೆಗೈದ ಪ್ರಿಯಕರ ಸೆರೆ

KannadaprabhaNewsNetwork |  
Published : Nov 03, 2025, 04:03 AM ISTUpdated : Nov 03, 2025, 07:35 AM IST
Crime News

ಸಾರಾಂಶ

ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು :  ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜೆ.ಹಳ್ಳಿ ನಿವಾಸಿ ರೇಣುಕಾ(35) ಕೊಲೆಯಾದ ದುರ್ದೈವಿ. ಅ.31ರ ರಾತ್ರಿ ಸುಮಾರು 11.30ಕ್ಕೆ ಪಿಳ್ಳಣ್ಣ ಗಾರ್ಡನ್‌ ಸರ್ಕಾರಿ ಶಾಲೆಯ ಬಳಿ ಈ ಘಟನೆ ನಡೆದಿದೆ. ಪ್ರೇಯಸಿಯನ್ನು ಕೊಲೆಗೈದ ಆರೋಪದಡಿ ಕುಟ್ಟಿ(42) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಆರೋಪಿ ಕುಟ್ಟಿ ಬ್ಯಾನರ್‌ ಪ್ರಿಟಿಂಗ್‌ ಹಾಗೂ ಫೈನಾನ್ಸ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಮತ್ತು ಮಕ್ಕಳೊಂದಿಗೆ ಡಿ.ಜೆ.ಹಳ್ಳಿಯಲ್ಲಿ ವಾಸವಿದ್ದ. ಇನ್ನು ರೇಣುಕಾ ಕೌಟುಂಬಿಕ ವಿಚಾರಕ್ಕೆ ಪತಿಯಿಂದ ವಿಚ್ಛೇದನ ಪಡೆದು ಕಳೆದ ಒಂದೂವರೆ ವರ್ಷಗಳಿಂದ ಡಿ.ಜೆ.ಹಳ್ಳಿಯಲ್ಲಿ ಮಗನೊಂದಿಗೆ ನೆಲೆಸಿದ್ದರು. ಜೀವನ ನಿರ್ವಹಣೆಗಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದರು.

ಕುಟ್ಟಿ ಮತ್ತು ರೇಣುಕಾ ಒಂದೇ ಏರಿಯಾದಲ್ಲಿ ನೆಲೆಸಿದ್ದ ಪರಿಣಾಮ ಪರಸ್ಪರ ಪರಿಚಿತರಾಗಿ ಬಳಿಕ ಪ್ರೀತಿಸಲು ಆರಂಭಿಸಿದ್ದರು. ಕೆಲ ತಿಂಗಳಿಂದ ರೇಣುಕಾ ತನ್ನನ್ನು ಮದುವೆಯಾಗುವಂತೆ ಕುಟ್ಟಿಯನ್ನು ಪೀಡಿಸುತ್ತಿದ್ದರು. ಇದಕ್ಕೆ ಕುಟ್ಟಿ ನಿರಾಕರಿಸಿದ್ದ. ತನಗ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಹೀಗಾಗಿ ಮದುವೆ ಬೇಡ, ಸಂಬಂಧ ಮುಂದುವರೆಸೋಣ ಎಂದಿದ್ದ. ಆದರೆ, ರೇಣುಕಾ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಕುಟ್ಟಿ, ರೇಣುಕಾಳ ಕೊಲೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಮಾತುಕತೆಗೆ ಕರೆದು ಇರಿದು ಕೊಂದ:

ಅ.31ರ ರಾತ್ರಿ ರಾತ್ರಿ ಕೆಲಸ ಮುಗಿಸಿಕೊಂಡು ರೇಣುಕಾ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಪಿಳ್ಳಣ್ಣ ಗಾರ್ಡನ್‌ ಬಳಿ ಎದುರಾದ ಕುಟ್ಟಿ, ಯಾವುದೋ ವಿಚಾರ ಮಾತನಾಡಬೇಕು ಎಂದು ರೇಣುಕಾಳನ್ನು ಸರ್ಕಾರಿ ಶಾಲೆ ಬಳಿಗೆ ಕರೆದೊಯ್ದಿದ್ದಾನೆ. ಈ ವೇಳೆ ಮದುವೆಗೆ ಒತ್ತಾಯಿಸದಂತೆ ರೇಣುಕಾಗೆ ಧಮಕಿ ಹಾಕಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಕುಟ್ಟಿ ಏಕಾಏಕಿ ತನ್ನ ಬಳಿ ಇದ್ದ ಚಾಕು ತೆಗೆದು ರೇಣುಕಾಳ ಎದೆ, ಹೊಟ್ಟೆಗೆ ಹತ್ತಾರು ಬಾರಿ ಇರಿದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೆನ್ನಟ್ಟಿ ಚಾಕುವಿನಿಂದ ಇರಿದು ರೇಣುಕಾಳನ್ನು ಕೊಲೆಗೈದು ಪರಾರಿಯಾಗಿದ್ದಾನೆ.

ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊಲೆಯಾದ ರೇಣುಕಾಳ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಕುಟ್ಟಿಯನ್ನು ಬಂಧಿಸಿದ್ದಾರೆ. ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಆಕೆಯನ್ನು ತಾನು ಕೊಲೆ ಮಾಡಿದ್ದಾಗಿ ಆರೋಪಿ ಕುಟ್ಟಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ