ಗದಗ: ಯುವ ವಕೀಲರಿಗೆ ಕೆಳ ಹಂತದ ನ್ಯಾಯಾಲಯ ಮೂಲ ಆಧಾರ ಎಂದು ನ್ಯಾ. ಶ್ರೀನಿವಾಸ ಹೇಳಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ಹಂತದಲ್ಲಿಯೇ ಕಾಲೇಜುಗಳಲ್ಲಿ ನಡೆಯುವ ಅಣಕು ನ್ಯಾಯಾಲಯ, ಅಣಕು ರಾಜಿ ಸಂಧಾನ, ಚರ್ಚಾ ಸ್ಪರ್ಧೆಗಳಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನು ತಾವು ಸಮರ್ಥರನ್ನಾಗಿ ಮಾಡಿಕೊಂಡು ನ್ಯಾಯಾಲಯದ ಮುಂದೆ ಹಾಜರಾದಾಗ ಪ್ರಕರಣಗಳನ್ನು ಪ್ರಬುದ್ಧರಾಗಿ ಎದುರಿಸಲು ಸಾಧ್ಯವಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ನಿರಂತರವಾಗಿ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ನಾವು ಸಮಾಜದಲ್ಲಿ ಹೆಸರು ಮತ್ತು ಹಣ ಗಳಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜೆ. ಶಿವಶಂಕ್ರಗೌಡ ಮಾತನಾಡಿ, ಸಂವಿಧಾನಕ್ಕೆ ಅಗೌರವ ತೋರಿಸುತ್ತಿರುವುದು ವಿದ್ಯಾವಂತರಾಗಿದ್ದಾರೆ. ಇದರಿಂದ ಸಂವಿಧಾನದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ನಡೆಯುವ ಅಣಕು ನ್ಯಾಯಾಲಯಗಳಲ್ಲಿ ಸಂವಿಧಾನದ ಮೂಲ ಯಾವುದು ಎಂಬುದನ್ನು ಅರಿತುಕೊಂಡು, ಸಮಾಜದಲ್ಲಿ ಸಂವಿಧಾನದ ಗೌರವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.ಕರ್ನಾಟಕ ಹೈಕೋಟ್ ನ್ಯಾಯಮೂರ್ತಿ ಉಮೇಶ ಮಂಜುನಾಥ ಭಟ್ಟ ಅಡಿಗ ಮಾತನಾಡಿ, ವಕೀಲ ವೃತ್ತಿಯಲ್ಲಿ ದಾವೆಗೆ ಸೂಕ್ತವಾಗಿರುವುದು ವಾದಪತ್ರವಾಗಿದೆ. ಆದ್ದರಿಂದ ಯುವ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ವಾದ, ಪ್ರತಿವಾದ ಪತ್ರಗಳನ್ನು ಚೆನ್ನಾಗಿ ಬರೆಯಬೇಕು. ಕಾನೂನು ಕೇವಲ ಒಂದು ಪುಸ್ತಕ ಅಲ್ಲ, ಅದು ಸಮುದ್ರವಿದ್ದಂತೆ. ಹಾಗಾಗಿ ವಿದ್ಯಾರ್ಥಿಗಳು ಕಾನೂನುಗಳನ್ನು ಅರ್ಥೈಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದರು.
ಈ ವೇಳೆ ಬೆಂಗಳೂರು ಕೆಎಲ್‌ಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಎಂ. ಮಲ್ಲಿಕಾರ್ಜುನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ, ಎಸ್.ಎ. ಮಾನ್ವಿ, ಸಿ. ಬಸವರಾಜ ಇದ್ದರು. ಪ್ರಾಚಾರ್ಯ ಜೈಹನುಮಾನ ಎಚ್.ಕೆ. ಸ್ವಾಗತಿಸಿದರು. ಉಪನ್ಯಾಸಕ ಡಾ. ವಿಜಯ ಮುರದಂಡೆ ವಂದಿಸಿದರು.