ಜಿಂದಾಲ್ ಕಾರ್ಖಾನೆಯಲ್ಲಿ ಎಲ್‌ಪಿಜಿ ಅನಿಲ ಸೋರಿಕೆ; ಕಾರ್ಮಿಕ ಸಾವು

KannadaprabhaNewsNetwork | Published : May 16, 2024 12:46 AM

ಸಾರಾಂಶ

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಆಗಾಗ ಇಂತಹ ಅವಘಡಗಳು ನಡೆಯುತ್ತಿದ್ದು, ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಿದ್ದರೂ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ ಎಂಬುದು ಕಾರ್ಮಿಕರ ಆರೋಪವಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕಾರ್ಖಾನೆಯಲ್ಲಿ ಎಲ್‌ಪಿಜಿ ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಜಿಂದಾಲ್ ಅಲ್ಯುಮಿನಿಯಂ ಕಾರ್ಖಾನೆಯಲ್ಲಿ ನಡೆದಿದೆ. ಬಿಹಾರ್ ರಾಜ್ಯದ ಪ್ರೈಮುರ್ ಜಿಲ್ಲೆಯ ಕರ್ವಂದಿಯಾ ಗ್ರಾಮದ ನಿವಾಸಿ ತೋಸಿಫ್ ಖಾನ್ (23) ಮೃತ ಕಾರ್ಮಿಕನಾಗಿದ್ದಾನೆ.

ಘಟನಾ ಹಿನ್ನಲೆ:

ಎಡೇಹಳ್ಳಿ ಗ್ರಾಮದಲ್ಲಿರುವ ಜಿಂದಾಲ್ ಕಂಪನಿಯ ಪ್ರೊಡಕ್ಷನ್ ಏರಿಯಾದ ಕಾಸ್ಟರ್ 7ರಲ್ಲಿ ಕಾರ್ಮಿಕರು ಕೆಲಸ ಮಾಡುವಾಗ ಎಲ್ ಪಿಜಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕ ತೋಸಿಫ್ ಖಾನ್ ದೇಹಕ್ಕೆ ಬೆಂಕಿ ತಗುಲಿದ್ದು, ತಕ್ಷಣ ಪಕ್ಕದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾನೆ.

ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳಿಲ್ಲ:

ಇನ್ನೂ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಉಪಕರಣಗಳನ್ನು ಕಂಪನಿಯ ಆಡಳಿತ ಮಂಡಳಿ ನೀಡದೇ ಕೆಲಸ ಮಾಡಿಸುತ್ತಿದ್ದು, ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುವ ಪರಿಸ್ಥಿತಿ ಕಾರ್ಮಿಕರಿಗೆ ಬಂದೊದಗಿದೆ. ಸುರಕ್ಷತಾ ಉಪಕರಣಗಳನ್ನು ಕೇಳಿದರೆ ಕೊಡಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಕೊಡಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇಂತಹ ಅವಘಡಗಳು ಇದೇ ಮೊದಲಲ್ಲ:

ಈ ಜಿಂದಾಲ್ ಕಂಪನಿಯಲ್ಲಿ ಹೆಚ್ಚಾಗಿ ಉತ್ತರ ಭಾರತದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಲವಾರು ಕಾರ್ಮಿಕರು ಈ ಹಿಂದೆ ಮೃತಪಟ್ಟಿದ್ದರೂ ಕಂಪನಿಯವರು ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸೂಕ್ತ ಪರಿಹಾರಕ್ಕೆ ಆಗ್ರಹ:

ಮೃತಪಟ್ಟ ಕಾರ್ಮಿಕ ಬಡಕುಟುಂಬದವರಾಗಿದ್ದು, ಈ ದುರ್ಘಟನೆಗೆ ಕಂಪನಿಯವರ ನಿರ್ಲಕ್ಷ್ಯವೇ ಕಾರಣವಾಗಿದೆ, ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಎಚ್ಚೆತ್ತುಗೊಳ್ಳದ ಕಾರ್ಮಿಕ ಇಲಾಖೆ:

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಆಗಾಗ ಇಂತಹ ಅವಘಡಗಳು ನಡೆಯುತ್ತಿದ್ದು, ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಿದ್ದರೂ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ ಎಂಬುದು ಕಾರ್ಮಿಕರ ಆರೋಪವಾಗಿದೆ.

ಪ್ರಕರಣ ದಾಖಲು:

ಪ್ರೊಡಕ್ಷನ್ ಇನ್ ಚಾರ್ಜ್ ಅಮಿತ್ ಸರ್ಕಾರ್, ಸುರಕ್ಷತೆ ಅಧಿಕಾರಿ ಬಂಗಾರು ಸೇರಿ ಜಿಂದಾಲ್ ಫ್ಯಾಕ್ಟರಿಯ ಮುಖ್ಯಸ್ಥರು ಮತ್ತು ಆಡಳಿತ ವರ್ಗದವರು, ಜವಾಬ್ದಾರಿಯುತ ಅಧಿಕಾರಿಯನ್ನು ನೇಮಿಸದೇ ನಿರ್ಲಕ್ಷ್ಯ ತೋರಿದ್ದು, ಇವರ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Share this article