ಎಲ್‌ಪಿಜಿ ಗ್ಯಾಸ್ ಟ್ರಬಲ್‌; 7 ಸಾವಿರಕ್ಕೂ ಅಧಿಕ ಆಟೋಗಳು ಬಂದ್

KannadaprabhaNewsNetwork |  
Published : Apr 03, 2026, 02:00 AM IST
ಬಳ್ಳಾರಿಯ ಗ್ಯಾಸ್ ಬಂಕ್‌ವೊಂದರ ಮುಂದೆ ಸಾಲುಗಟ್ಟಿ ನಿಂತಿರುವ ಆಟೋಗಳು.  | Kannada Prabha

ಸಾರಾಂಶ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಅಭಾವ, ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ತತ್ತರಿಸುತ್ತಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಅಭಾವ, ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮ ತತ್ತರಿಸುತ್ತಿದೆ. ಮತ್ತೊಂದೆಡೆ ಆಟೋ ಬಳಕೆಯ ಗ್ಯಾಸ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಬೆಲೆ ಏರಿಕೆ ಬಳಿಕ ಎಲ್‌ಪಿಜಿ ಗ್ಯಾಸ್ ಅಳವಡಿಸಿಕೊಂಡಿರುವ ನಗರದ 13 ಸಾವಿರ ಆಟೋಗಳ ಪೈಕಿ 7ಸಾವಿರಕ್ಕೂ ಅಧಿಕ ಆಟೋಗಳು ರಸ್ತೆಗಿಳಿಯದೇ ಮೂಲೆ ಸೇರಿವೆ.

ಬಳ್ಳಾರಿಯಲ್ಲಿ ಸಿಎನ್‌ಜಿ ಗ್ಯಾಸ್‌ಗೆ ಸಮಸ್ಯೆಯಿಲ್ಲ. ಆದರೆ, ಎಲ್‌ಪಿಜಿ ಗ್ಯಾಸ್ ಸಿಗದೇ ಆಟೋ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಗ್ಯಾಸ್ ಅಭಾವ ಸೃಷ್ಟಿಯಾಗುತ್ತಿದ್ದಂತೆಯೇ ಆಟೋ ಚಾಲಕರು ಸಾಲುಗಟ್ಟಿ ನಿಂತು ಗ್ಯಾಸ್ ಪಡೆಯುತ್ತಿದ್ದಾರೆ.

ಬಳ್ಳಾರಿಯಲ್ಲಿ ಎಂಜಿ, ಅಂದ್ರಾಳು, ಎಪಿಎಂಸಿ, ಏಳು ಮಕ್ಕಳ ತಾಯಿ ದೇವಸ್ಥಾನ, ಕುಮಾರಸ್ವಾಮಿ, ಶ್ರೀಕನಕ ದುರ್ಗಮ್ಮ ದೇವಸ್ಥಾನ ಹಾಗೂ ಗಾಂಧಿನಗರ ವಾಟರ್ ಬೂಸ್ಟರ್ ಬಳಿ ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಇದ್ದು, ಈ ಪೈಕಿ ಎರಡು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಭಾರತ ಪೆಟ್ರೋಲಿಯಂನವರ ಸಿಎನ್‌ಜಿ ಗ್ಯಾಸ್ ಕಿಟ್‌ಗಳು ಲಭ್ಯವಿವೆ. ಆದರೆ, ಸಿಎನ್‌ಜಿ ಅಳವಡಿಸಿಕೊಂಡಿರುವ ಆಟೋಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಎಲ್‌ಪಿಜಿ ಅವಲಂಬಿತರು ಮಾತ್ರ ಪರದಾಟ ಎದುರಿಸುತ್ತಿದ್ದಾರೆ.

ಪೆಟ್ರೋಲ್ ಹಾಕಿಸಿ ಆಟೋ ಓಡಿಸಲು ಸಾಧ್ಯವಿಲ್ಲ:

ಗ್ಯಾಸ್ ಅಳವಡಿಸಿಕೊಳ್ಳಲು ನಗರದ ಗಾಂಧಿನಗರ ಬೂಸ್ಟರ್ ಬಳಿಯ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಗುರುವಾರ ಕಂಡು ಬಂತು. ಈ ಕುರಿತು ಕನ್ನಡಪ್ರಭ ಜತೆ ಅಳಲು ತೋಡಿಕೊಂಡ ಆಟೋ ಚಾಲಕರು, ಅಮೆರಿಕ-ಇರಾನ್ ಯುದ್ಧ ಶುರುವಾದ ಬಳಿಕ ಎಲ್‌ಪಿಜಿ ಗ್ಯಾಸ್ ತೀವ್ರ ದುಬಾರಿಯಾಗಿದೆ. ಈ ಹಿಂದೆ ಲೀಟರ್‌ಗೆ ₹62 ಗಳಿಷ್ಟಿದ್ದ ಗ್ಯಾಸ್ ಇದೀಗ ₹95 ಕ್ಕೆ ಏರಿಕೆಯಾಗಿದೆ. ಆಟೋ ಬಾಡಿಗೆ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಆಟೋಗಳ ನಿರ್ವಹಣೆ ಸಾಧ್ಯವಿಲ್ಲ. ಪೆಟ್ರೋಲ್ ಬೆಲೆ ಸಹ ಭಾರೀ ಏರಿಕೆಯಾಗಿರುವುದಿಂದ ಪೆಟ್ರೋಲ್ ನಿಂದ ಆಟೋಗಳನ್ನು ಓಡಿಸಲು ಸಾಧ್ಯವಿಲ್ಲ. ಹೀಗಾಗಿ ಸುಮಾರು 7 ಸಾವಿರಕ್ಕೂ ಅಧಿಕ ಆಟೋಗಳು ರಸ್ತೆಗಿಳಿಯುತ್ತಿಲ್ಲ. ಆಟೋ ಚಾಲಕರು ತಾತ್ಕಾಲಿಕವಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಾಲೆ ಟ್ರಿಪ್‌ಗಳನ್ನು ಹೊಂದಿರುವ ಆಟೋಗಳು ಮಾತ್ರ ನಿರಂತರವಾಗಿ ಆಟೋಗಳನ್ನು ಓಡಿಸುತ್ತಿದ್ದಾರೆಯೇ ವಿನಃ ಉಳಿದವರು ಆಟೋ ವೃತ್ತಿಯಿಂದ ದೂರ ಸರಿಯುತ್ತಿದ್ದಾರೆ ಎಂದು ಆಟೋ ಚಾಲಕ ಪ್ರದೀಪ್ ತಿಳಿಸಿದರು.

ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಯೂ ಏರಿಕೆಯಾಗಿದ್ದು ಬೇಡಿಕೆಯಷ್ಟು ಗ್ಯಾಸ್ ಸಿಗದೆ ಹೋಟೆಲ್ ಉದ್ಯಮ ಮತ್ತಷ್ಟು ಕುಗ್ಗಿ ಹೋಗಿದೆ. ಈಗಾಗಲೇ ಅನೇಕ ಹೋಟೆಲ್‌ಗಳಲ್ಲಿ ದೋಸೆ, ಪೂರಿ ಸೇರಿದಂತೆ ಹೆಚ್ಚು ಗ್ಯಾಸ್ ಬಳಕೆಯಾಗುವ ಪದಾರ್ಥಗಳನ್ನು ಸ್ಥಗಿತಗೊಳಿಸಲಾಗಿದೆ. ಗ್ಯಾಸ್ ಸಮಸ್ಯೆ ಸೃಷ್ಟಿಯಾದ ಬಳಿಕ ಸೌದೆ ಒಲೆಯನ್ನು ಅನೇಕರು ಅಳವಡಿಸಿಕೊಂಡಿದ್ದಾರಾದರೂ ಬೇಸಿಗೆಯ ಬೇಗುದಿಯಲ್ಲಿ ಒಲೆಯ ಮುಂದೆ ಕೆಲಸ ಮಾಡಲು ಅಡುಗೆ ತಯಾರಕ ಕಾರ್ಮಿಕರು ಸಿದ್ಧರಿಲ್ಲ. ಈಗಾಗಲೇ ಸಾಕಷ್ಟು ಜನರು ಕೆಲಸ ಬಿಟ್ಟು ಹೋಗಿದ್ದಾರೆ. ಒಂದೆಡೆ ಗ್ಯಾಸ್ ಸಮಸ್ಯೆ ನಡುವೆ ಒಲೆಯ ಮುಂದೆ ನಿಂತು ಕೆಲಸ ಮಾಡುವ ಅಡುಗೆ ತಯಾರಕರನ್ನು ಹಿಡಿದುಕೊಳ್ಳುವುದು ಕಷ್ಟವಾಗಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಖಜಾಂಚಿ ಹರೀಶ್ ಶೆಟ್ಟಿ ಕನ್ನಡಪ್ರಭಕ್ಕೆ ವಿವರಿಸಿದರು.

ಎಲ್‌ಪಿಜಿ ಗ್ಯಾಸ್ ಸಿಗದೇ ಆಟೋ ಚಾಲಕರು ಉರಿಬಿಸಿಲಿನಲ್ಲಿ ಗಂಟೆಗಟ್ಟಲೇ ಕಾಯುವಂತಾಗಿದೆ. ಒಂದೆಡೆ ಗ್ಯಾಸ್ ಬೆಲೆ ಏರಿಕೆ, ಮತ್ತೊಂದೆಡೆ ಗ್ಯಾಸ್ ಅಭಾವದಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ತಾತ್ಕಾಲಿಕವಾಗಿ ಆಟೋ ಚಾಲಕ ವೃತ್ತಿ ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನುತ್ತಾರೆ ಬಳ್ಳಾರಿಯ ಶ್ರೀಕನಕ ದುರ್ಗಮ್ಮ ಸರ್ಕಲ್‌ನ ಆಟೋ ಚಾಲಕ ಮೋಹನ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ಕುಲಪತಿ ಪಾಟೀಲ್‌
ಮಹಿಳೆಯರು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಪ್ರಗತಿಯ ಸೂಚಕ