ಚಿತ್ರದುರ್ಗ: 12ನೇ ಶತಮಾನದ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿ, ನಾಡಿಗೆ ನೀಡಿದ ದೊಡ್ಡ ಕೀರ್ತಿ ಮಡಿವಾಳ ಮಾಚಿದೇವ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಸಮಾರಂಭದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಮಡಿವಾಳ ಮಾಚಿದೇವರ ಕಾಯಕ ಮಡಿ ಮಾಡುವಂತಹದು. ಬಸವಣ್ಣನವರ ಅನುಭವ ಮಂಟಪದಲ್ಲಿ ಮಾಚಿದೇವ ಅವರು ಬಹಳ ಪ್ರಮುಖ ಸ್ಥಾನ ಹೊಂದಿದವರು. ಮಡಿವಾಳ ಮಾಚಿದೇವರನ್ನು ವೀರಭದ್ರ ಸ್ವಾಮಿಯ ಅವತಾರ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರ ದಾರಿಯಲ್ಲಿ ನಾವು ಸಾಗೋಣ ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ವಿನಾಶದತ್ತ ಹೋಗುತ್ತಿರುವ ಇಂದಿನ ಕಾಲದಲ್ಲಿ ಮಡಿವಾಳ ಮಾಚಿದೇವ ಸೇರಿದಂತೆ ವಚನಕಾರರನ್ನು ನೆನಸಬೇಕಿದೆ. ಕ್ರಾಂತಿಕಾರಿ ಬಸವಣ್ಣನವರ ಆಶಯಗಳ ಮೇಲೆ ಸಂವಿಧಾನ ರಚನೆಯಾಗಿದೆ. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಸಮಾಜದ ಕೊಳೆಯನ್ನು ಶುಚಿ ಮಾಡಿ ಬದುಕುತ್ತಿರುವ ಮಡಿವಾಳ ಸಮಾಜ ಶಿಕ್ಷಣವಂತರಾಗಬೇಕು. ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಬೇಕಾಗಿರುವುದರಿಂದ ಈ ಜನಾಂಗ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಇತಿಹಾಸ ಸಂಶೋಧಕ ಡಾ.ಎಸ್.ಎನ್.ಮಹಾಂತೇಶ್ ಉಪನ್ಯಾಸ ನೀಡಿ ವಚನ ಸಾಹಿತ್ಯ ಉಳಿಸಿ ನಾಡಿಗೆ ಕೊಟ್ಟಂತ ಕೀರ್ತಿ ಮಡಿವಾಳ ಮಾಚಿದೇವಸ್ವಾಮಿಗೆ ಸಲ್ಲುತ್ತದೆ. ಯಾರಿಗೂ ಬಗ್ಗದ ಮಡಿವಾಳ ಮಾಚಿದೇವರು ತಮಗೆ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದರು. ಬಸವಣ್ಣ, ಅಕ್ಕಮಹಾದೇವಿ ವಚನಗಳಲ್ಲಿ ಮಡಿವಾಳ ಮಾಚಯ್ಯನವರ ವ್ಯಕ್ತಿತ್ವ ಏನು ಎನ್ನುವುದು ಗೊತ್ತಾಗುತ್ತದೆ. ಸ್ವಾಭಿಮಾನದ ಸಂಕೇತವಾಗಿರುವ ಈ ಸಮಾಜ ಯಾರನ್ನು ಬೇಡಲಿಲ್ಲ. ಮಡಿವಾಳ ಜನಾಂಗಕ್ಕೆ ಬುದ್ದಿ ಬರಬೇಕಿದೆ. ಹಾಗಾಗಿ ತಿದ್ದಿ ತೀಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ಮಡಿವಾಳ ಮಾಚಿದೇವರನ್ನು ಜನಾಂಗಕ್ಕಷ್ಟೆ ಸೀಮಿತಗೊಳಿಸಿಕೊಳ್ಳುವುದು ಸರಿಯಲ್ಲ. ಹೊಟ್ಟೆಕಿಚ್ಚು ಬಿಟ್ಟು ಮೊದಲು ಸಂಘಟಿತರಾಗಿ. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿಯವರಲ್ಲಿ ಮಡಿವಾಳ ಮಾಚಿದೇವರು ಒಬ್ಬ ವಚನ ಸಂರಕ್ಷಕರು. ಬಸವಣ್ಣನವರ ವಿಚಾರಗಳಲ್ಲಿ ಮಾಚಯ್ಯನವರ ಪ್ರಸ್ತಾಪವಾಗಿದೆ. ವಚನ ಸಾಹಿತ್ಯ ಉಳಿಸುವ ಎದೆಗಾರಿಕೆ, ತಾಕತ್ತು ಇದ್ದುದರಿಂದಲೇ ಬಸವಣ್ಣನವರು ಮಾಚಯ್ಯನನ್ನು ಕಲ್ಯಾಣಕ್ಕೆ ಕರೆಸಿಕೊಂಡು ಅನುಭವ ಮಂಟಪ ರಕ್ಷಿಸುವ ಕೆಲಸ ನೀಡುತ್ತಾರೆ. ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲೂ ಮಡಿವಾಳ ಮಾಚಿದೇವರ ವಿಚಾರಗಳಿವೆ ಎಂದು ನುಡಿದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡಿ ಮಡಿವಾಳ ಮಾಚಿದೇವರು ಸಂರಕ್ಷಿಸಿರುವ ವಚನಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಶುಚಿಗೊಳಿಸುವ ಕಾಯಕದಿಂದ ಹೆಸರುವಾಸಿಯಾಗಿರುವ ಮಡಿವಾಳ ಜನಾಂಗ ಮಡಿವಾಳ ಮಾಚಿದೇವರು ಹಾಕಿಕೊಟ್ಟ ಮಾರ್ಗದದಲ್ಲಿ ನಡೆಯಬೇಕು ಎಂದು ತಿಳಿಸಿದರು.ಮಡಿವಾಳ ಸಮಾಜದ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಉಪವಿಭಾಗಾಧಿಕಾರಿ ಕಾರ್ತಿಕ್, ನಗರಸಭೆ ಪೌರಾಯುಕ್ತೆ ರೇಣುಕ, ಮಡಿವಾಳ ಸಮಾಜದ ಪ್ರಕಾಶ್, ರುದ್ರಮುನಿ, ರಂಗಪ್ಪ, ರಮೇಶ್, ಶಿವಲಿಂಗಪ್ಪ, ಮಂಜುನಾಥ್, ರಂಗಮ್ಮ, ವೀಣಾ, ಲಕ್ಷ್ಮಣ, ವಿನೋದಮ್ಮ, ಗೋಪಾಲಪ್ಪ, ಲಕ್ಷ್ಮಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಜಯಂತಿಯಲ್ಲಿ ಭಾಗವಹಿಸಿದ್ದರು.