ಮಡಹಳ್ಳಿ ರಸ್ತೇಲಿ ಉಚಿತ ಧೂಳಿನ ಸಿಂಚನ!

KannadaprabhaNewsNetwork | Published : Nov 7, 2024 11:48 PM

ಸಾರಾಂಶ

ಗುಂಡ್ಲುಪೇಟೆ ಮಡಹಳ್ಳಿ ರಸ್ತೆಯಲ್ಲಿ ಪಾದಚಾರಿಗಳು ಧೂಳಿನ ನಡುವೆ ನಡೆದುಕೊಂಡು ಹೋಗುತ್ತಿರುವುದು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಜನಸಂದಣಿ ಇರುವ ರಸ್ತೆಗಳಲ್ಲಿ ಒಂದಾದ ಮಡಹಳ್ಳಿ ರಸ್ತೆ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು, ಬೈಕ್‌, ಸೈಕಲ್‌ ಸವಾರರಿಗೆ ಧೂಳು ಉಚಿತವಾಗಿ ಸಿಗುತ್ತಿದೆ.

ಪಟ್ಟಣದ ಮಡಹಳ್ಳಿ ಸರ್ಕಲ್‌ನಿಂದ ಜೆಎಸ್‌ಎಸ್‌ ಅನುಭವ ಮಂಟಪದ ತನಕದ ರಸ್ತೆಯಲ್ಲಿ ಗುಂಡಿಗಳ ತಾಣವಾಗಿದೆ. ಜೊತೆಗೆ ಡಾಂಬಾರು ರಸ್ತೆ ಮಣ್ಣಿನ ರಸ್ತೆಯಂತೆ ಕಾಣುತ್ತಿದೆ. ಈ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ಮಂದಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ನಡೆದು ಹೋಗುವ ಸಮಯದಲ್ಲಿ ರಸ್ತೆಯಲ್ಲಿ ವಾಹನಗಳು ಹೋದರೆ ಸಾಕು ಧೂಳು ಉಚಿತವಾಗಿ ಸಿಗುತ್ತಿದೆ. ಈ ರಸ್ತೆಯಲ್ಲಿ ಶಾಲಾ, ಕಾಲೇಜು, ಪೊಲೀಸ್‌, ಅರಣ್ಯ ಇಲಾಖೆ, ವಿದ್ಯಾರ್ಥಿ ನಿಲಯ, ಕಂದಾಯ ಇಲಾಖೆ ವಸತಿ ಗೃಹ, ಚರ್ಚ್‌, ನ್ಯಾಯಾಲಯ, ಕಲ್ಯಾಣ ಮಂಟಪಗಳ ಜೊತೆಗೆ ರಸ್ತೆ ಎರಡು ಬದಿ ಜನ ವಾಸಿಸುವ ಬಡಾವಣೆಗಳಿವೆ.

ರಸ್ತೆಯ ಎರಡು ಬದಿ ಚರಂಡಿ ಇಲ್ಲ, ಮಳೆ ಬಂದಾಗ ಮಳೆ ಮಣ್ಣು ಹೊತ್ತು ತಂದು ರಸ್ತೆಗೆ ಬಿಡುತ್ತದೆ. ಮಳೆ ನಿಂತ ಬಳಿಕ ಕೆಸರು ಮಯವಾಗುತ್ತದೆ ಈ ರಸ್ತೆ ಕೆಸರುಮಯವಾದ ಬಳಿಕ ಧೂಳಿನ ರಸ್ತೆಯಾಗಿ ಪರಿವರ್ತನೆ ಆಗುತ್ತದೆ ಎಂದು ಪಾದಚಾರಿಗಳು ಹೇಳಿದ್ದಾರೆ. ಈ ರಸ್ತೆಯಲ್ಲಿ ಎರಡು ಕಲ್ಯಾಣ ಮಂಟಪಗಳಿವೆ. ಮದುವೆಗೆ ಬರುವ ಪಾದಚಾರಿಗಳು ಅದರಲ್ಲೂ ಮಹಿಳೆಯರು ನಡೆದು ಹೋಗುವ ಸಮಯದಲ್ಲಿ ವಾಹನಗಳು ಬಂದಾಗ ಮದುವೆ ಸಿಂಗಾರ ಮಾಡಿಕೊಂಡು ಬಂದ ಮಹಿಳೆಯರಿಗೆ ಧೂಳು ತುಂಬುವುದರಿಂದ ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕುವುದು ಸಾಮಾನ್ಯವಾಗಿದೆ. ಮೊದಲೇ ಗುಂಡಿಗಳ ತಾಣವಾಗಿರುವ ರಸ್ತೆಯಲ್ಲಿ ಧೂಳಿನ ಸಿಂಚನವಾಗುತ್ತಿದೆ. ಈ ಜನಸಂದಣಿ ರಸ್ತೆಯಲ್ಲಿ ಮಡಹಳ್ಳಿ ಬಳಿ ಕ್ರಷರ್‌ನಿಂದ ಓವರ್‌ ಲೋಡ್‌ ತುಂಬಿದ ಎಂ.ಸ್ಯಾಂಡ್‌, ಜಲ್ಲಿ ತುಂಬಿದ ಟಿಪ್ಪರ್‌, ಟ್ರ್ಯಾಕ್ಟರ್‌ ಬಂದಾಗಲಂತೂ ರಸ್ತೆಯ ಇಕ್ಕೆಲೆಗಳಲ್ಲಿನ ಅಂಗಡಿ ಮುಂಗಟ್ಟುಗಳಿದ್ದು ಧೂಳಿನಿಂದ ತೊಂದರೆ ಆಗಿದೆ ಎಂದು ಮಹೇಶ್‌ ಆರೋಪಿಸಿದರು.

ಈ ರಸ್ತೆಯಲ್ಲಿ ಮಡಹಳ್ಳಿ ಸರ್ಕಲ್‌ ಬಳಿ ಬೀದಿ ಬದಿ ಟೀ ಕ್ಯಾಂಟೀನ್‌, ಫಾಸ್ಟ್‌ ಫುಡ್‌ ವ್ಯಾಪಾರ ನಡೆಯುತ್ತಿದೆ. ವಾಹನಗಳು ಸಂಚರಿಸುವಾಗ ಹಾಗೂ ಗಾಳಿ ಬಂದಾಗ ಧೂಳು ತಿನ್ನುವ ಆಹಾರದ ಮೇಲೂ ಮೆತ್ತಿಕೊಳ್ಳುತ್ತಿದೆ ಎಂದು ಕಾರ್ಮಿಕನೊಬ್ಬ ದೂರಿದ್ದಾನೆ.

ಮುಕ್ತಿ ನೀಡಿ ಶಾಸಕರೇ: ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾಗಿ ಒಂದೂ ಮುಕ್ಕಾಲು ವರ್ಷಗಳಾಗುತ್ತಿದೆ. ಮಡಹಳ್ಳಿ ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು ನಿಂತಿಲ್ಲ. ಧೂಳಿಗೂ ಮುಕ್ತಿ ಸಿಕ್ಕಿಲ್ಲ. ಶಾಸಕರೂ ಈಗಾಗಲಾದರೂ ಈ ರಸ್ತೆ ಅಭಿವೃದ್ಧಿ ಮನಸ್ಸು ಮಾಡಿ ಎಂದು ನೂರಾರು ಜನರು ಮನವಿ ಮಾಡಿ ಒತ್ತಾಯಿಸಿದ್ದಾರೆ.

Share this article