ಕೂಡ್ಲಿಗಿ: ವಾಲ್ಮೀಕಿ ಸಮುದಾಯಕ್ಕೆ ಈ ನಾಡನ್ನು ಆಳ್ವಿಕೆ ಮಾಡಿದ ಕೀರ್ತಿ ಇದೆ. ಇಂದು ವಾಲ್ಮೀಕಿ ಸಮುದಾಯ ಮೀಸಲಾತಿ ಇದ್ದರೂ ಬೇರೆ ಸಮುದಾಯಗಳ ಪಾಲಾಗುತ್ತಿದೆ. ಸಮುದಾಯಕ್ಕೂ ಮೀಸಲಾತಿ ಅಗತ್ಯವಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಹೊಸಹಳ್ಳಿಯಲ್ಲಿ ರಾಜವೀರ ಮದಕರಿನಾಯಕ ಜಯಂತ್ಯುತ್ಸವ, ಮದಕರಿ ನಾಯಕ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ರಾಜರಿಗಿಂತ ಪಾಳೇಗಾರರೇ ಜನತೆಗೆ ಹತ್ತಿರ:
ಈ ಹಿಂದೆ ಕನ್ನಡನಾಡನ್ನು ರಾಜರು ಆಳ್ವಿಕೆ ನಡೆಸಿದ್ದಾರೆ. ಅವರು ತೀರಾ ಜನತೆಯ ಹತ್ತಿರ ಹೋಗಲಿಲ್ಲ ಆದರೆ ಇಂದು ರಾಜರಿಗಿಂತ ಪಾಳೇಗಾರರೇ ಹೆಚ್ಚು ಜನತೆಗೆ ತೀರಾ ಹತ್ತಿರವಾಗಿದ್ದರಿಂದ ಇಂದಿಗೂ ನಮ್ಮ ಜನಪದರು, ಪೂರ್ವಜರ ಬಾಯಲ್ಲಿ ಲಾವಣಿ ಹಾಡುಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಆದರೆ ರಾಜರ ಬಗ್ಗೆ ಜನಪದರು ಕಟ್ಟಿರುವ ಲಾವಣಿಗಳು ಇಲ್ಲಿವರೆಗೂ ದೊರಕಿಲ್ಲ ಎಂದರು.ಯುದ್ಧದಲ್ಲಿ ರಾಜರು ಸತ್ತಿದ್ದು ಅಪರೂಪ:
ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಮದಕರಿ ನಾಯಕ ವೃತ್ತ ಹಾಗೂ ನಾಮಫಲಕ ಅನಾವರಣ ಮಾಡಿ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ಜನಪರ ಕೆಲಸ ಮಾಡುವ ಮೂಲಕ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದೇನೆ. ಬಳ್ಳಾರಿಯಲ್ಲಿಯೂ ಜನತೆ ಶಹಬ್ಬಾಸ್ ಹೇಳಿದ್ದಾರೆ. ಆದರೆ ತವರು ಕ್ಷೇತ್ರದಲ್ಲಿ ಇನ್ನೂ ಪಿಪ್ಟಿ ಪಿಪ್ಟಿ ಇದೆ ಅವರು ಇನ್ನೂ ಶಹಬ್ಬಾಸ್ ಹೇಳಿಲ್ಲ. ಇನ್ನಷ್ಟುಕೆಲಸಗಳು ಆಗಬೇಕಿದೆ ಎಂದರು. ಕೂಡ್ಲಿಗಿ ತಾಲೂಕಿನಲ್ಲಿ 74 ಕೆರೆಗಳಿಗೆ ನೀರುಣಿಸುವ ಯೋಜನೆ ಕಾಮಗಾರಿ ಶೇಕಡ 99 ರಷ್ಟು ಮುಗಿದಿದೆ ಇನ್ನೂ ಕೆಲವೇ ತಿಂಗಳಲ್ಲಿಯೇ ಬರದ ನಾಡಿಗೆ ಗಂಗೆ ಹರಿಯಲಿದ್ದಾಳೆ ಎಂದರು.
ರಾಜ್ಯದ ದ್ರಾಕ್ಷಿರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಎಸ್.ಪಿ.ಪ್ರಕಾಶ್, ಎನ್.ಟಿ.ತಮ್ಮಣ್ಣ, ಹುಡೇಂ ಪಾಪನಾಯಕ, ಎಸ್.ಸುರೇಶ್, ಕೊಲುಮೆಹಟ್ಟಿ ವೆಂಕಟೇಶ್, ಸೂರ್ಯಪ್ರಕಾಶ್, ಮಾಜಿ ಜಿಪಂ ಸದಸ್ಯ ಕೆ.ಎಂ.ಶಶಿಧರ್, ಬಿಟಿ ಗುದ್ದಿ ದುರುಗೇಶ, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಕೆ.ಪಿ.ಪಂಪಾಪತಿ, ಸೇರಿ ಸಮುದಾಯ ಹಲವು ಮುಖಂಡರು ಇದ್ದರು.ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಲ್ಮೀಕಿ ಸಮುದಾಯದ ಜನತೆ ಪಾಲ್ಗೊಂಡಿದ್ದರು.