ಪೌರಕಾರ್ಮಿಕರಿಗೆ ಮಾದರ ಚನ್ನಯ್ಯ ಶ್ರೀ ಸಾಥ್‌

KannadaprabhaNewsNetwork |  
Published : Dec 25, 2024, 12:46 AM IST
ಪೌರಕಾರ್ಮಿಕರ ಧರಣಿ ಸ್ಥಳಕ್ಕೆ ಮಾದಾರ ಚನ್ನಯ್ಯ ಶ್ರೀಗಳು ಹಾಗೂ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಭೇಟಿ ನೀಡಿ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಸಮಸ್ಯೆ ಪರಿಹಾರ ಆಗಬೇಕಾದಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟದ ಅನಿವಾರ್ಯತೆಯಿದೆ. ಈ ಕೂಡಲೇ ಸಮಾಜದ ಸಚಿವರಾದ ಕೆ.ಎಚ್‌. ಮುನಿಯಪ್ಪ ಹಾಗೂ ಆರ್‌.ಬಿ. ತಿಮ್ಮಾಪುರ ಅವರನ್ನು ಭೇಟಿಯಾಗಿ ಸಮಸ್ಯೆ ಕುರಿತು ಮನವರಿಕೆ ಮಾಡುತ್ತೇನೆ ಎಂದು ಶ್ರೀಗಳು ಹೇಳಿದರು.

ಹುಬ್ಬಳ್ಳಿ:

ಪೌರಕಾರ್ಮಿಕರ ಬೇಡಿಕೆ ಆದಷ್ಟು ಬೇಗನೆ ಈಡೇರಿಸದಿದ್ದರೆ ಅವರೊಂದಿಗೆ ನಾನೂ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಶ್ರೀ ಎಚ್ಚರಿಕೆ ನೀಡಿದರು.ಮಹಾನಗರ ಪಾಲಿಕೆ ಎದುರು ನೇರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 14 ದಿನಗಳಿಂದ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಪೌರಕಾರ್ಮಿಕರ ಅಹವಾಲು ಆಲಿಸಿ ಮಾತನಾಡಿದರು.

ಪೌರಕಾರ್ಮಿಕರ ಸೇವೆ ಎಲ್ಲರೂ ಮೆಚ್ಚುವಂತಹದ್ದು. ಅವರು ಒಂದು ದಿನ ನಗರ ಸ್ವಚ್ಛಗೊಳಿಸದೇ ಇದ್ದರೆ ನಗರದ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪೌರಕಾರ್ಮಿಕರು ತಮಗೆ ನ್ಯಾಯ ನೀಡುವಂತೆ 14 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಪಾಲಿಕೆ ಆಯುಕ್ತರಾಗಲಿ ಸಮಸ್ಯೆ ಆಲಿಸದೆ ಇರುವುದು ನೋವಿನ ಸಂಗತಿ ಎಂದರು.

ಸಮಸ್ಯೆ ಪರಿಹಾರ ಆಗಬೇಕಾದಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟದ ಅನಿವಾರ್ಯತೆಯಿದೆ. ಈ ಕೂಡಲೇ ಸಮಾಜದ ಸಚಿವರಾದ ಕೆ.ಎಚ್‌. ಮುನಿಯಪ್ಪ ಹಾಗೂ ಆರ್‌.ಬಿ. ತಿಮ್ಮಾಪುರ ಅವರನ್ನು ಭೇಟಿಯಾಗಿ ಸಮಸ್ಯೆ ಕುರಿತು ಮನವರಿಕೆ ಮಾಡಿ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುವೆ ಎಂದರು.

ಪೌರಕಾರ್ಮಿಕರ ಈ ಸಮಸ್ಯೆಯನ್ನು ಬೆಳಗಾವಿಯಲ್ಲಿ ನಡೆಯುವ ಎಐಸಿಸಿ ಸಭೆಯೊಳಗೆ ಇತ್ಯರ್ಥಪಡಿಸಬೇಕು. ಇಲ್ಲದೇ ಇದ್ದರೆ ಈ ಅಹೋರಾತ್ರಿ ಧರಣಿಯಲ್ಲಿ ನಾನೂ ಸೇರಿದಂತೆ ಹಲವು ಮಠಾಧೀಶರು, ಮುಖಂಡರ ನೇತೃತ್ವದಲ್ಲಿ ನ್ಯಾಯ ದೊರೆಯುವ ವರೆಗೂ ದೊಡ್ಡಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ. ಪೌರಕಾರ್ಮಿಕರ ಬೇಡಿಕೆಗಳ ಕುರಿತು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸೂಕ್ತ ನ್ಯಾಯ ಒದಗಿಸುವಂತೆ ತಿಳಿಸುತ್ತೇನೆ. ಅಲ್ಲದೇ 14 ದಿನ ಕಳೆದರೂ ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾಧಿಕಾರಿ ಹಾಗೂ ಆಯುಕ್ತರ ನಡೆ ಖಂಡಿಸುತ್ತೇನೆ. ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಳ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಬಸಪ್ಪ ಮಾದರ, ನಿಂಗಪ್ಪ ಮೊರಬದ, ಮರಿಯಪ್ಪ ರಾಮಯ್ಯನವರ, ಆನಂದ ಬೆನಸಮಟ್ಟಿ ರಮೇಶ ರಾಮಯ್ಯನವರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ದತಪ್ಪ ಆಪುಸಪೇಟ್, ಲಕ್ಷ್ಮೀ ಬೇತಾಪಲ್ಲಿ, ರಾಧಾ ಬಾಗಲಾಡ, ಯಲಪ್ಪ ಪಾಳೇದ ಸೇರಿದಂತೆ ಹಲವರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ