ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಂದೆಡೆ ಹಗ್ಗ ಹಿಡಿದ ಇಪ್ಪತ್ತಕ್ಕೂ ಹೆಚ್ಚು ಮಂದಿ ಮಹಿಳಾ ಮಣಿಗಳು, ಮತ್ತೊಂದೆಡೆ ಮಾದಾರ ಶ್ರೀ ನೇತೃತ್ವದಲ್ಲಿ ಅಷ್ಟೇ ಪ್ರಮಾಣದ ಮಹಿಳೆಯರು. ನೋಡ ನೋಡುತ್ತಿದ್ದಂತೆ ಹಗ್ಗ ಜಗ್ಗಾಟ ಶುರುವಾಯ್ತು. ಮಾದಾರ ಶ್ರೀ ಶಕ್ತಿ ಮೀರಿ ಹಗ್ಗ ಹಿಂದೆ ಎಳೆದರೂ ಆ ಕಡೆ ಸ್ತ್ರೀ ಶಕ್ತಿಯ ಅಲುಗಾಡಿಸಲು ಆಗಲೇ ಇಲ್ಲ. ಅಂತಿಮವಾಗಿ ನಗುತ್ತಲೇ ಹಗ್ಗ ಕೈ ಬಿಟ್ಟ ಮಾದಾರ ಶ್ರೀ ನಮ್ಮ ಕೈಲಿ ಆಗಲ್ಲಪ್ಪಾ ಅಂದು ಹಿಂದೆ ಸರಿದರು.ಇಂತಹದ್ದೊಂದು ದೃಶ್ಯ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಕಂಡು ಬಂದಿತು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಮಹಿಳಾ ಕ್ರೀಡಾಕೂಟಕ್ಕೆ ಹಗ್ಗ ಜಗ್ಗಾಟದ ಮೂಲಕ ಚಾಲನೆ ನೀಡಿ ಶುಭ ಕೋರಿದರು. ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟಗಳಿಗೆ ಮಾದಾರ ಶ್ರೀ ಗಳೆ ಉಸ್ತುವಾರಿ ವಹಿಸುತ್ತಾರೆ. ಪೂರ್ವಾಶ್ರಮದಲ್ಲಿ ಕ್ರಿಡಾಪಟುವಾಗಿದ್ದರು ಎಂಬ ಕಾರಣಕ್ಕೆ ಅವರ ಉತ್ಸಾಹಕ್ಕೆ ಮುರುಘಾ ಮಠ ಚಾಲನಾ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಈ ವೇಳೆ ಮಾತನಾಡಿದ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಜಯದೇವ ಶ್ರೀಗಳು ನಾಡಿನಾದ್ಯಾಂತ ಸಮಾಜ ಸೇವೆ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ತಾಯಿಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟರು. ಮೈಸೂರು ಸಂಸ್ಥಾನ ಮಾಡಿರುವಷ್ಟೇ ಸಮಾಜ ಮುಖಿ ಕಾರ್ಯಗಳನ್ನು ಜಯದೇವ ಸ್ವಾಮಿಗಳು ಮಾಡಿ ತೋರಿಸಿ ಕೊಟ್ಟಿದ್ದಾರೆ. ಜಯದೇವ ಸ್ವಾಮಿಗಳು ಮಾಡಿರುವ ಕೆಲಸಗಳನ್ನು ಮಾದಾರ ಚೆನ್ನಯ್ಯಶ್ರೀಗಳು ಲೇಸರ್ ಶೋ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.ಬಸವಕಲ್ಯಾಣ ಬಸವ ಮಹಾಮನೆಯ ಶರಣೆ ಸತ್ಯಕ್ಕ ಮಾತನಾಡಿ, ಗೃಹಿಣಿಯರು ಆಸಕ್ತಿಯಿಂದ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ದೈಹಿಕವಾಗಿ ಉಲ್ಲಾಸ, ಮನಸ್ಸಿಗೆ ಸಂತೋಷ ಸಿಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರಲ್ಲಿ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯ ಸದೃಢವಾಗಿರುತ್ತದೆ. ಆರೋಗ್ಯ ಮತ್ತು ಮನಸ್ಸು ಎರಡನ್ನು ಸಮತೋಲನದಲ್ಲಿಡಲು ಕ್ರೀಡೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ವೀಣಾ ಸುರೇಶ್ ಬಾಬು ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿರುವ ಈ ಕ್ರೀಡಾಕೂಟವು ಮಹಿಳೆಯರ ಪಾಲಿಗೆ ಭಾಗ್ಯವೇ ಸರಿ. ಹೆಣ್ಣುಮಕ್ಕಳು ಸದಾ ಮನೆ ಸಂಸಾರ ಎಂಬ ಜಂಜಾಟದಿಂದ ಹೊರಬಂದು ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಟೈಕೊಂಡೋ ಕ್ರೀಡಾಪಟು ಎಂ.ಅನಿತ ಹಾಗೂ ಚಲನಚಿತ್ರ ನಟಿ ಅಶ್ವಿನಿ ಗೌಡರನ್ನು ಸನ್ಮಾನಿಸಲಾಯಿತು.
ಬೀರವಳ್ಳಿ ಶ್ರೀ ಗುರುದೇವ ತಪೋವನದ ಶರಣೆ ನಂದಾತಾಯಿ, ಕವಲೆತ್ತು ಬಸವ ಕೇಂದ್ರದ ಶರಣೆ ಮುಕ್ತಾಯಕ್ಕ, ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಹಾಗೂ ಕಲ್ಯಾಣಪುರ ಶ್ರೀ ಕಲ್ಯಾಣ ಬಸವೇಶ್ವರ ಮಠದ ಶರಣೆ ಚಿನ್ಮಯಿತಾಯಿ, ನಗರಸಭೆ ಆಯುಕ್ತೆ ರೇಣುಕಮ್ಮ, ಎಂ.ಕೆ ಹಟ್ಟಿ ಗ್ರಾಪಂ ಅಧ್ಯಕ್ಷ ಆರ್.ಗಣೇಶ್, ಲತಾ ಉಮೇಶ್ ಉಪಸ್ಥಿತರಿದ್ದರು. ರುದ್ರಾಣಿ ಗಂಗಾಧರ್ ಸ್ವಾಗತಿಸಿ, ಮೋಕ್ಷಾ ರುದ್ರಸ್ವಾಮಿ ನಿರೂಪಿಸಿದರು.