ಮದ್ದೂರು ಗಣೇಶ ಉತ್ಸವ: ಮಸೀದಿ ಎದುರು ಹೈಡ್ರಾಮಾ!

KannadaprabhaNewsNetwork |  
Published : Sep 17, 2026, 02:00 AM IST
ಮದ್ದೂರಲ್ಲಿ ಗಣೇಶ ಮೆರವಣಿಗೆ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ 108 ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ದರ್ಗಾ ಮತ್ತು ಮಸೀದಿ ಎದುರು ಹೈಡ್ರಾಮಾ ನಡೆದ ಪ್ರಸಂಗ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ, ಮದ್ದೂರು:

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ 108 ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ದರ್ಗಾ ಮತ್ತು ಮಸೀದಿ ಎದುರು ಹೈಡ್ರಾಮಾ ನಡೆದ ಪ್ರಸಂಗ ಬುಧವಾರ ನಡೆಯಿತು. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಬಳಿ ಬ್ಯಾರಿಕೇಡ್ ಅಳವಡಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ನಗರದ ಮದ್ದೂರು-ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿ ಸಮೀಪದ ಈಶ್ವರ ದೇಗುಲದ ಬಳಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಗಣೇಶ ಮೂರ್ತಿಗಳ ಮೆರವಣಿಗೆಗೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಚಾಲನೆ ನೀಡಿದರು. ಮಧ್ಯಾಹ್ನ 12 ಗಂಟೆಗೆ 108 ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತು.

ಮದ್ದೂರಿನ ಪೇಟೆಬೀದಿಯ ದರ್ಗಾ ಮುಂಭಾಗ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯಲ್ಲಿದ್ದ ಹಿಂದೂ ಕಾರ್ಯಕರ್ತರು ಕರ್ಪೂರ ಹಚ್ಚಿ, ನೃತ್ಯ ಮಾಡಿ, ಪಟಾಕಿ ಹಚ್ಚಲು ಯತ್ನಿಸಿದರು. ಕೆಲವರು ವಾಹನದ ಮೇಲೆ ನಿಂತು ಹನುಮ ಧ್ಚಜ ಬೀಸಿ ಜೈಕಾರ ಮೊಳಗಿಸಿದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದಾಗ ಹಿಂದೂಪರ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ, ಮೆರವಣಿಗೆ ಜಾಮಿಯಾ ಮಸೀದಿ ಬಳಿಗೆ ಆಗಮಿಸುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಪಟಾಕಿ ಸಿಡಿಸಿ, ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು, ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದರು. ಇದೇ ವೇಳೆ, ಮಸೀದಿ ಮುಂದೆ ಪಟಾಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು. ಪಟಾಕಿ ಮೇಲೆ ನೀರು ಸುರಿದ ಪೊಲೀಸರು ಕಾರ್ಯಕರ್ತರನ್ನು ಎತ್ತಿಕೊಂಡು ಹೋದರು. ಆಗ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಮಸೀದಿ ಮುಂದೆ ಪಟಾಕಿ ಹೊಡೆಯಲು ಅವಕಾಶ ನೀಡದಿದ್ದಕ್ಕೆ ರಸ್ತೆಯಲ್ಲೇ ಕುಳಿತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಕ್ಷಣವೇ ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಹಿಂದೂ ಕಾರ್ಯಕರ್ತರ ಮನವೊಲಿಸಿ ಅಲ್ಲಿಂದ ಅವರನ್ನು ಕಳುಹಿಸಿದರು.

ನಂತರ, ಮೆರವಣಿಗೆ ಟಿ.ಬಿ.ಸರ್ಕಲ್, ಹಳೇ ಎಂ.ಸಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಳೆ ಆಂಜನೇಯಸ್ವಾಮಿ ದೇಗುಲದ ಬಳಿ ಆಗಮಿಸಿತು. ಸುಮಾರು 5 ಗಂಟೆಗಳ ಕಾಲ ನಗರದ ವಿವಿಧೆಡೆ ಸಾಗಿದ ಮೆರವಣಿಗೆ, ಸಂಜೆಯ ವೇಳೆಗೆ ಶಿಂಷಾ ನದಿಯ ದಡದ ಬಳಿ ಆಗಮಿಸಿತು. ಅಲ್ಲಿ ಸಾಮೂಹಿಕ ಪೂಜೆ ನೆರವೇರಿಸಿದ ಬಳಿಕ, ಗಣೇಶನ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಕೆಲ ಗಣೇಶ ಮೂರ್ತಿಗಳನ್ನು ಬೋಟ್ ಮೂಲಕ ವಿಸರ್ಜಿಸಿದರೆ, ಕೆಲ ದೊಡ್ಡ ಗಣೇಶ ಮೂರ್ತಿಗಳನ್ನು ಕ್ರೇನ್ ಸಹಾಯದಲ್ಲಿ ವಿಸರ್ಜಿಸಲಾಯಿತು. ಇನ್ನು ಕೆಲವು ಗಣೇಶ ಮೂರ್ತಿಗಳನ್ನು ಕಾರ್ಯಕರ್ತರೇ ವಿಸರ್ಜನೆ ಮಾಡಿದರು.

ಮೆರವಣಿಗೆಯಲ್ಲಿ ದೋಸ್ತಿ ನಾಯಕರು ಪ್ರತ್ಯೇಕ ಭಾಗಿ:

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ದೋಸ್ತಿ ನಾಯಕರು ಪ್ರತ್ಯೇಕವಾಗಿ ಭಾಗವಹಿಸಿದುದು ಕಂಡು ಬಂತು. ಬೆಳಗ್ಗೆ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಬಿಜೆಪಿ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಇತರರು ಚಾಲನೆ ನೀಡಿ, ಕೆಲ ದೂರ ಮೆರವಣಿಗೆಯಲ್ಲಿ ಸಾಗಿ, ತೆರಳಿದರು. ಈ ವೇಳೆ, ಜೆಡಿಎಸ್ ನಾಯಕರು ಗೈರು ಹಾಜರಾಗಿದ್ದರು. ಬಿಜೆಪಿ ನಾಯಕರು ತೆರಳಿದ ಬಳಿಕ ಜೆಡಿಎಸ್ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಸೇರಿದಂತೆ ಮುಖಂಡರು-ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಎಸ್‌ಎಸ್‌ ಎಂದರೆ ಗೃಹಮಂತ್ರಿಗೆ ಚೇಳು ಕಡಿದಂಗಾಗುತ್ತೆ
ಮಳೆಗಾಲದಲ್ಲೇ ಬರಿದಾಗುತ್ತಿದೆ ಐತಿಹಾಸಿಕ ಭೀಷ್ಮ ಕೆರೆ!