ಮದ್ದೂರು: ರಾಗಿ ಖರೀದಿ ಕೇಂದ್ರದ ಸ್ಥಗಿತಕ್ಕೆ ಆಕ್ರೋಶ

KannadaprabhaNewsNetwork |  
Published : Dec 16, 2025, 01:00 AM IST
ರಾಗಿ ಖರೀದಿ ಕೇಂದ್ರ ಸ್ಥಗಿತಕ್ಕೆ ಆಕ್ರೋಶ | Kannada Prabha

ಸಾರಾಂಶ

ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಲು ಸೋಮವಾರ ಸಂಜೆವರೆಗೆ ಅವಕಾಶ ನೀಡಬೇಕಾಗಿತ್ತು. ಆದರೆ, ಬೆಳಗ್ಗೆ 11 ಗಂಟೆ ಸುಮಾರಿಗೆ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರದ ಅಧಿಕಾರಿಗಳು ಸಬೂಬ್‌ ನೀಡಿ ಖರೀದಿಗೆ ಪರ್ಮಿಟ್ ನೀಡದೆ ಸ್ಥಗಿತ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಗಿ ಖರೀದಿ ಕೇಂದ್ರ ಸ್ಥಗಿತ ಗೊಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ರೈತರು ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಸಿ.ಉಮೇಶ್ ನೇತೃತ್ವದಲ್ಲಿ ವಳಗೆರೆಹಳ್ಳಿ, ಹೆಮ್ಮನಹಳ್ಳಿ, ಯಡಗನಹಳ್ಳಿ, ಕಳ್ಳಿ ಮೇಳ ದೊಡ್ಡಿ, ಹುಲಿಗೆರೆಪುರ ಹಾಗೂ ದೇವರಹಳ್ಳಿ ಗ್ರಾಮಗಳಿಂದ ಆಗಮಿಸಿದ್ದ ರೈತರು ದಿಢೀರ್ ಪ್ರತಿಭಟನೆ ನಡೆಸಿ ಸೋಮವಾರದಿಂದ ರಾಗಿ ಖರೀದಿ ಕೇಂದ್ರ ಸ್ಥಗಿತಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಜನಪ್ರತಿನಿಧಿಗಳು ಮಧ್ಯ ಪ್ರವೇಶ ಮಾಡಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಪಡಿಸಿದರು.

ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಸರಬರಾಜು ಮಾಡಲು ಸೋಮವಾರ ಸಂಜೆವರೆಗೆ ಅವಕಾಶ ನೀಡಬೇಕಾಗಿತ್ತು. ಆದರೆ, ಬೆಳಗ್ಗೆ 11 ಗಂಟೆ ಸುಮಾರಿಗೆ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರದ ಅಧಿಕಾರಿಗಳು ಸಬೂಬ್‌ ನೀಡಿ ಖರೀದಿಗೆ ಪರ್ಮಿಟ್ ನೀಡದೆ ಸ್ಥಗಿತ ಮಾಡಿದ್ದಾರೆ ಎಂದು ಧರಣಿನಿರತ ರೈತರು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕ್ಷೇತ್ರದ ಶಾಸಕ ಕೆ.ಎಂ .ಉದಯ್ ಈ ಬಗ್ಗೆ ಸರ್ಕಾರದ ಗಮನ ಸೆಳೆದು ರಾಗಿ ಖರೀದಿ ಕೇಂದ್ರವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸತೀಶ್, ಶಂಕರ, ಲಕ್ಷ್ಮಣ, ರಾಮಕೃಷ್ಣ, ಮಹೇಶ್, ಸುರೇಶ್, ಪುಟ್ಟಮ್ಮ, ಸಹನಾ, ಸುದರ್ಶನ್ ಹಾಗೂ ಮನು ಸೇರಿದಂತೆ ಹಲವರು ಭಾಗವಹಿಸಿದ್ದರು.

ತೊಡೆ ಮುರಿದುಕೊಂಡಿದ್ದ ವೃದ್ಧೆಯ ಬಳಿಗೆ ಬಂದ ನ್ಯಾಯಾಧೀಶರಿಂದ ಪರಿಹಾರ ಬಿಡುಗಡೆಗೆ ಆದೇಶ

ಕನ್ನಡಪ್ರಭ ವಾರ್ತೆ ಮದ್ದೂರು

ಅಪಘಾತದಲ್ಲಿ ತೊಡೆ ಮುರಿದುಕೊಂಡಿದ್ದ ವೃದ್ಧೆಯೊಬ್ಬರು ಮೆಟ್ಟಿಲು ಹತ್ತಿ ನ್ಯಾಯಾಲಯಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕೆ ಇದ್ದ ಸ್ಥಳಕ್ಕೆ ಆಗಮಿಸಿದ ನ್ಯಾಯಾಧೀಶರು, ಪರಿಹಾರದ ಹಣ ಬಿಡುಗಡೆ ಮಾಡಲು ಆದೇಶ ನೀಡಿ ಮಾನವೀಯತೆ ಮೆರೆದ ಪ್ರಸಂಗ ಪಟ್ಟಣದ ನ್ಯಾಯಾಲಯದಲ್ಲಿನ ಲೋಕ ಅದಾಲತ್‌ನಲ್ಲಿ ನಡೆಯಿತು.

ಇಲ್ಲಿನ ರಾಮ್ ರಹೀಮ್ ನಗರ ಬಡಾವಣೆಯ ನಿವಾಸಿ 75 ವರ್ಷದ ಗೌರಮ್ಮ ಕಳೆದ 2025ರ ಜುಲೈ 15ರಂದು ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಬಳಿ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಬಲತೊಡೆ ಮುರಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪಘಾತ ಮಾಡಿದ ಟೆಂಪೋ ಮಾಲೀಕರ ವಿರುದ್ಧ ವಕೀಲ ಎಚ್.ಎಂ.ಸೋಸಲೇಗೌಡ ಅವರಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಲೋಕ ಅದಾಲತ್‌ನಲ್ಲಿ ವಿಚಾರಣೆ ನಡೆಯಿತು. ತಮ್ಮ ಮೊಮ್ಮಗ ಮನು ಸಹಾಯದಿಂದ ಆಟೋದಲ್ಲಿ ಆಗಮಿಸಿದ ಗಾಯಾಳು ಗೌರಮ್ಮ ಮೆಟ್ಟಿಲು ಹತ್ತಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ ವಕೀಲ ಸಂಘದ ಆವರಣದಲ್ಲಿ ಕುಳಿತಿದ್ದರು.

ವಿಚಾರ ತಿಳಿದ ಒಂದನೇ ಅಪರ ಸಿವಿಲ್ ನ್ಯಾಯಾಧೀಶೆ ಎನ್‌.ಬಿ.ಮೋಹನ್ ಕುಮಾರಿ ಅವರು ಗೌರಮ್ಮ ಇದ್ದ ಸ್ಥಳಕ್ಕೆ ಹೋಗಿ ವಿಚಾರಣೆ ಮಾಡಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿ 2.70 ಲಕ್ಷ ರು. ವಿಮೆ ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!