ಕನ್ನಡಪ್ರಭ ವಾರ್ತೆ ಮದ್ದೂರು
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಮುಂಜಾನೆ ಶ್ರೀವೈದ್ಯನಾಥೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ ಬಿಲ್ವಾರ್ಚನೆ ಸೇವೆ ಬಳಿಕ ವೈದ್ಯನಾಥೇಶ್ವರ ಶ್ರೀಪ್ರಸನ್ನ ಪಾರ್ವತಂಬ ದೇವರುಗಳಿಗೆ ಪುಷ್ಪಾಲಂಕಾರ ಸೇವೆಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಬೆಳಗ್ಗೆ 10.30ರಿಂದ 11 ಗಂಟೆ ಸುಮಾರಿಗೆ ಶುಭ ಮೀನ ಲಗ್ನದಲ್ಲಿ ಶ್ರೀವೈದ್ಯನಾಥೇಶ್ವರ ಹಾಗೂ ಪ್ರಸನ್ನ ಸಮೇತ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.ಮುಜರಾಯಿ ಇಲಾಖೆ ಪರವಾಗಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಕುಟುಂಬ ಸಮೇತ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತಾದಿಗಳು ಶಿವನಾಮ ಸ್ಮರಣೆಯೊಂದಿಗೆ ರಥವನ್ನು ಎಳೆದು ಧನ್ಯತಾ ಭಾವ ಮೆರೆದರು.
ರಥೋತ್ಸವ ದೇಗುಲದ ಪ್ರಾಂಗಣದಲ್ಲಿ ನೆರವೇರಿದ ನಂತರ ಶ್ರೀಮದ್ದೂರಮ್ಮ, ನಗರಕೆರೆ ಪಟಲಾದಮ್ಮ, ಆಲೂರಮ್ಮ ದೇವಿಯ ಉತ್ಸವದೊಂದಿಗೆ ಬೂದನೂರು ಗ್ರಾಮದ ಅಂಕನಾಥೇಶ್ವರ ವೀರಗಾಸೆ ಕಲಾತಂಡ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದ ರಥೋತ್ಸವಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ರಥೋತ್ಸವದ ಅಂಗವಾಗಿ ವೈದ್ಯನಾಥಪುರ ಗ್ರಾಮಸ್ಥರು ಅಲ್ಲಲ್ಲಿ ಅರವಟ್ಟಿಗೆಗಳನ್ನು ತೆರೆದು ಭಕ್ತಾದಿಗಳಿಗೆ ಕೋಸಂಬರಿ, ಪಾನಕ ಮತ್ತು ಮಜ್ಜಿಗೆ ವಿತರಣೆ ಮಾಡಿದರು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರ ಹೋಬಳಿಯ ಜೆ.ಬ್ಯಾಡರಹಳ್ಳಿ, ಹಾಗೂ ಶ್ರೀ ಪ್ರಸನ್ನ ಪಾರ್ವತಂಬ ವೈದ್ಯನಾಥೇಶ್ವರ ಟ್ರಸ್ಟ್ ಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು.
ರಥೋತ್ಸವದ ಅಂಗವಾಗಿ ಮದ್ದೂರು ಪೊಲೀಸ್ ಠಾಣೆ ಕಾನೂನು ಶಿಸ್ತು ವಿಭಾಗದ ಪಿಎಸ್ಐ ಮಂಜುನಾಥ್ ಹಾಗೂ ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಹಾಗೂ ಸಿಬ್ಬಂದಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಶಿಂಷಾನದಿಯಲ್ಲಿ ಮುಳುಗಿದ್ದ ವೃದ್ಧೆಯನ್ನು ರಕ್ಷಣೆ ಮಾಡಿದ ಭಕ್ತರು
ಮದ್ದೂರು:ತಾಲೂಕಿನ ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರ ರಥೋತ್ಸವಕ್ಕೆ ಬಂದಿದ್ದ ವೃದ್ಧ ಭಕ್ತೆಯೊಬ್ಬರು ಶಿಂಷಾನದಿಗೆ ಬಿದ್ದು ಮುಳುಗುತ್ತಿದ್ದ ವೇಳೆ ಗ್ರಾಮಸ್ಥರ ಸಹಾಯದಿಂದ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ. ತಾಲೂಕು ರಾಂಪುರ ಗ್ರಾಮದ ಸುಶೀಲಮ್ಮ 75 ಅವರನ್ನು ಗ್ರಾಮಸ್ಥರ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀವೈದ್ಯನಾಥೇಶ್ವರ ರಥೋತ್ಸವಕ್ಕಾಗಿ ಗ್ರಾಮದಿಂದ ಬಂದಿದ್ದ ಸುಶೀಲಮ್ಮ ಕೈ ಕಾಲು ತೊಳೆಯಲು ನದಿ ನೀರಿಗೆ ಇಳಿದಿದ್ದಾರೆ.
ಈ ವೇಳೆ ಆಕೆಗೆ ರಕ್ತದೊತ್ತಡ ಕುಂಠಿತಗೊಂಡು ತೀವ್ರವಾಗಿ ಅಸ್ವಸ್ಥಗೊಂಡು ನದಿ ನೀರಿಗೆ ಬಿದ್ದು ಮುಳುಗುವ ಹಂತದಲ್ಲಿದ್ದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ನೀಲಕಂಠನಹಳ್ಳಿ, ಆಲೂರು ಹಾಗೂ ವೈದ್ಯನಾಥಪುರ ಗ್ರಾಮಸ್ಥರು ಸುಶೀಲಮ್ಮ ಅವರನ್ನು ನೀರಿನಿಂದ ಹೊರಗೆಳೆದು ರಕ್ಷಣೆ ಮಾಡಿ ಉಪಚರಿಸಿದ್ದಾರೆ.ಆ ನಂತರ ಆಂಬ್ಯೂಲೆನ್ಸ್ ಮೂಲಕ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನಂತರ ಆಕೆ ಬಳಿ ಇದ್ದ ಆಧಾರ್ ಕಾರ್ಡ್ ಮೂಲಕ ವಿಳಾಸ ಪತ್ತೆ ಮಾಡಿ ಕುಟುಂಬದವರನ್ನು ಮಾಹಿತಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.