ಮದ್ದೂರು ತಾಲೂಕು ಕಚೇರಿ ಭೂಮಿ ಗ್ರಾಮಾಡಳಿತಾಧಿಕಾರಿ ಲಕ್ಷ್ಮೀದೇವಿ ಅಮಾನತು

KannadaprabhaNewsNetwork |  
Published : Feb 17, 2025, 12:33 AM IST
16ಕೆಎಂಎನ್ ಡಿ22  | Kannada Prabha

ಸಾರಾಂಶ

ಮದ್ದೂರು ತಾಲೂಕು ಕಚೇರಿ ಭೂಮಿ ಗ್ರಾಮಾಡಳಿತಾಧಿಕಾರಿ ಲಕ್ಷ್ಮೀದೇವಿ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ತಪ್ಪುಗಳನ್ನು ಎಸಗಿದ್ದು, ಅವರಿಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅಮಾನತು ಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಕರ್ತವ್ಯ ಲೋಪ ಆರೋಪದ ಮೇಲೆ ತಾಲೂಕು ಕಚೇರಿ ಭೂಮಿ ಗ್ರಾಮಾಡಳಿತ ಅಧಿಕಾರಿ ಲಕ್ಷ್ಮೀದೇವಿ ಅವರನ್ನು ಜಿಲ್ಲಾಧಿಕಾರಿಗಳು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ತಪ್ಪುಗಳನ್ನು ಎಸಗಿದ್ದು, ಅವರಿಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅಮಾನತು ಪಡಿಸಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಭೀಮನಕೆರೆ ಗ್ರಾಮದ ಸ.ನಂ.121-3ರಲ್ಲಿ 2.04.08 ಎಕರೆ- ಗುಂಟೆ ವಿಸ್ತೀರ್ಣದ ಆರ್ ಟಿಸಿ ಕಾಲಂ- 11ರಲ್ಲಿ ಜಪ್ತಿ ಆದೇಶ ಮತ್ತು ಸೊಸೈಟಿ ಸಾಲದ ಬಗ್ಗೆ ವಿವರಗಳು ನಮೂದಾಗಿದ್ದರೂ ಯಾವುದೇ ಆದೇಶವಿಲ್ಲದೆ ಆರ್ ಟಿಸಿ ಕಾಲಂ -11ರಲ್ಲಿದ್ದ ಋಣ ಭಾರ ತೆಗೆದು ಹಾಕಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಮೇಲಾಧಿಕಾರಿಗಳ ಯಾವುದೇ ಆದೇಶವಿಲ್ಲದೆ ಆ‌ರ್.ಟಿ.ಸಿ ಕಾಲಂ 11ರ ನಮೂದನ್ನು ತೆಗೆದುಹಾಕಲಾಗಿದೆ. ಇದರಿಂದ ಸ.ನಂ 121/3ರ ಜಮೀನು ಬೇರೆಯವರಿಗೆ ಕ್ರಯವಾಗಲು ಪರೋಕ್ಷವಾಗಿ ಸಹಾಯ ಮಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ತಾಲೂಕು ಕಚೇರಿ ಮುಂದೆ ಜನಪ್ರತಿನಿಧಿಗಳು ಷೇರುದಾರರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದರು.

ಆ‌ರ್.ಟಿ.ಸಿ ಕಾಲಂ-11ರಲ್ಲಿದ್ದ ಋಣ ಭಾರವನ್ನು ತೆಗೆದುಹಾಕಿರುವ ಬಗ್ಗೆ ತಹಸೀಲ್ದಾ‌ರ್ ಅವರು ನೌಕರರಿಗೆ ಆಗಿರುವ ಕರ್ತವ್ಯ ಲೋಪದ ಬಗ್ಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದು, ನೌಕರರು ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ತಿಳಿದುಬಂದಿದೆ. ಇದು ನೌಕರರ ನಿಯಮಬಾಹಿರ ಕಾರ್ಯ ವೈಖರಿಯನ್ನು ಬಿಂಬಿಸುತ್ತದೆ.

ಭೀಮನಕೆರೆ ಗ್ರಾಮದ ಸ.ನಂ 121/3 ರಲ್ಲಿ 2-04.08 ಜಮೀನು 2024-25ನೇ ಸಾಲಿನ ಆರ್ ಟಿಸಿಯಂತೆ ಕಾಲಂ 9ರಲ್ಲಿ ನಾಗರಾಜು ಬಿನ್ ಲೇ ಬೋರಯ್ಯ ಎಂಬ ಹೆಸರಿದ್ದು, ಕಾಲಂ 11ರಲ್ಲಿ ಹೊನ್ನಲಗೆರೆ ವಿ.ಎಸ್.ಎಸ್.ಬಿ.ಎನ್ ಕೆ ವ್ಯವಸ್ಥಾಪಕರು 36,500 ರು. ಮತ್ತು ಕೆ.ಹೊನ್ನಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ 3,00,000 ರು. ಎಂದು ನಮೂದಾಗಿದೆ. ಸದರಿ ಋಣಭಾರ ಕಾಲಂ ನಲ್ಲಿದ್ದ ನಮೂದನ್ನು ಭೂಮಿ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀದೇವಿ ಯಾವುದೇ ಆದೇಶವಿಲ್ಲದೇ ತೆಗೆದು ಹಾಕಿ ಕರ್ತವ್ಯ ಲೋಪ ಎಸಗಿದ್ದಾರೆ.

ಋಣಭಾರ ಕಾಲಂನಲ್ಲಿದ್ದ ನಮೂದನ್ನು ತೆಗೆದು ಹಾಕುವ ಮೂಲಕ ನಾಗರಾಜು ಬಿನ್ ಲೇ ಬೋರಯ್ಯ ಇವರಿಂದ ಬೇರೆ ವ್ಯಕ್ತಿಗೆ ಜಮೀನು ಕ್ರಯವಾಗಲು ಅವಕಾಶ ಮಾಡಿಕೊಟ್ಟು ನಾಗರಾಜು ಅವರಿಗೆ ನಿಯಮಬಾಹಿರವಾಗಿ ಆರ್ಥಿಕ ಲಾಭ ಉಂಟು ಮಾಡುವ ಉದ್ದೇಶ ಹೊಂದಿರುವುದು ನೌಕರರ ಉದ್ದೇಶವನ್ನು ತೋರಿಸುತ್ತದೆ ಮತ್ತು ನೌಕರರು ಈ ಅಕ್ರಮವನ್ನು ಉದ್ದೇಶ ಪೂರ್ವಕವಾಗಿ ಎಸಗಿರುತ್ತಾರೆ ಎಂಬುದು ಮಂಡ್ಯ ಉಪವಿಭಾಗಾಧಿಕಾರಿಗಳ ವರದಿಯಿಂದ ತಿಳಿದುಬಂದಿದೆ.

ಈ ಕಾರಣಗಳಿಂದಾಗಿ ಭೂಮಿ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀದೇವಿ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ