ಹೊಸಪೇಟೆ: ಬಳ್ಳಾರಿ ಜೀನ್ಸ್ ಜಾಗತಿಕ ಮಟ್ಟದಲ್ಲಿ "ಮೇಡ್ ಇನ್ ಇಂಡಿಯಾ " ಎಂದು ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಭಾಗದಲ್ಲಿ ಸಾರಿಗೆ, ಸಂಪರ್ಕ ವಲಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಿವೆ. ಅದರಲ್ಲೂ ರೈಲ್ವೆ ಕಾಮಗಾರಿಗಳು ನಡೆದಿವೆ. ರಾಯಚೂರು, ಗಿಣಿಗೇರಾ, ಗದ್ವಾಲ್ ರೈಲ್ವೆ ಕಾಮಗಾರಿಯೂ ನಡೆಸಲಾಗಿದೆ. ನಾವು ಅಭಿವೃದ್ದಿಗೆ ಉತ್ತೇಜನ ನೀಡಿದ್ದೇವೆ. ಜವಳಿ ಉದ್ಯಮಕ್ಕೂ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕೊಪ್ಪಳದ ಆಟಿಕೆ ಜಾಗತಿಕ ಮಟ್ಟಕ್ಕೆ:ಈ ಹಿಂದೆ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಆಟಿಕೆಗಳ ಉದ್ಯಮಕ್ಕೆ ಉತ್ತೇಜನ ನೀಡಲಾಯಿತು. ಕೊಪ್ಪಳದ ಆಟಿಕೆಗಳಿಗೆ ಈಗ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಇದರಿಂದ ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಆಟಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳುವ ಪ್ರಕ್ರಿಯೆ ತಗ್ಗಿದೆ ಎಂದರು.
ಒಂದು ವೇಳೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ನೀವು ಗಳಿಸಿದ ಆಸ್ತಿ, ಸಂಪತ್ತಿನಲ್ಲಿ ನಿಮ್ಮ ಬಳಿಕ ಮಕ್ಕಳಿಗೆ ವರ್ಗಾವಣೆ ಮಾಡುವಾಗ ಶೇ.55ರಷ್ಟನ್ನು ಕಾಂಗ್ರೆಸ್ ಸರ್ಕಾರವೇ ಪಡೆಯಲು ಆಲೋಚಿಸಿದೆ. ಶೇ.45 ನಿಮ್ಮ ಮಕ್ಕಳಿಗೆ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಮೋದಿ ಅವಕಾಶ ನೀಡುವುದಿಲ್ಲ ಎಂದರು.
ಪ್ರಗತಿಯತ್ತ ದಾಪುಗಾಲು:
ದೇಶಕ್ಕೆ ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ಕಾಂಗ್ರೆಸ್ ಇದಕ್ಕೂ ಅಡ್ಡಗಾಲು ಹಾಕಿತ್ತು. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯವನ್ನು ನಾವು ಈಡೇರಿಸಿದ್ದೇವೆ. ಕಾಶ್ಮೀರದಲ್ಲೂ ದಲಿತರಿಗೆ ಮೀಸಲಾತಿ ನೀಡಿದ್ದೇವೆ. ದೇಶಕ್ಕೆ ಒಂದು ಸಂವಿಧಾನ, ಕಾಶ್ಮೀರಕ್ಕೆ ಇನ್ನೊಂದು ಸಂವಿಧಾನ ಇತ್ತು. ಆದರೆ, ನಾವು ಈಗ ಡಾ.ಬಾಬಾಸಾಹೇಬ್‌ರ ಸಂವಿಧಾನವನ್ನು ಕಾಶ್ಮೀರದಲ್ಲೂ ಅನುಷ್ಠಾನಗೊಳಿಸಿದ್ದೇವೆ ಎಂದರು.