ಭಟ್ಕಳ: ಬೆಳಕೆಯ ಉದ್ಯಮಿ ಹಾಗೂ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕರು ತಾವು ಖರೀಧಿಸಿದ ಜಾಗದಲ್ಲಿ ಶಾಲೆ ಇರುವುದನ್ನು ಮನಗಂಡು ನಾಲ್ಕು ಗುಂಟೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿ ಮಾದರಿಯಾಗಿದ್ದಾರೆ.
ತಾಲೂಕಿನ ಬೆಳಕೆ ನೂಜ ಮಜಿರೆಯ ಹೆರ್ಬುಡ್ಕಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆಯು ೧೯೯೨ರಿಂದಲೂ ಖಾಸಗಿ ಜಾಗದಲ್ಲಿ ನಡೆಯುತ್ತಿತ್ತು. ಅಂದಿನಿಂದಲೇ ಜಾಗವನ್ನು ಶಾಲೆಗೆ ಹಸ್ತಾಂತರ ಮಾಡಿಕೊಳ್ಳುವಲ್ಲಿ ಪ್ರಯತ್ನಗಳೂ ನಡೆಯುತ್ತಿದ್ದರೂ ಫಲಪ್ರದವಾಗಿರಲಿಲ್ಲ.
ಗ್ರಾಮೀಣ ಭಾಗದ ಶಾಲೆಯಾದ್ದರಿಂದ ಇಲ್ಲಿಗೆ ಬರುವ ಮಕ್ಕಳೂ ಗ್ರಾಮೀಣ ಭಾಗದಿಂದಲೇ ಬರುವವರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಬಾರದು, ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಬೇಕು ಎನ್ನುವುದು ಮಾದೇವ ನಾಯ್ಕ ದಂಪತಿಗಳ ಮುಖ್ಯ ಉದ್ದೇಶವಾಗಿತ್ತು.ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮಾದೇವ ನಾಯ್ಕ ಅವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಾಗೂ ಯಾವುದೇ ಶಾಲೆಗೆ ಸರ್ಕಾರಿ ಸೌಲಭ್ಯ ಬರುವಲ್ಲಿ ಶಾಲೆಯು ಸ್ವಂತ ಜಾಗದಲ್ಲಿ ಇರಬೇಕಾಗುತ್ತದೆ ಎನ್ನುವ ಕಲ್ಪನೆಯಲ್ಲಿ ಜಾಗವನ್ನು ದಾನವಾಗಿ ಕೊಟ್ಟು ಅಗತ್ಯದ ಕಾಗದ ಪತ್ರಗಳನ್ನು ಮಾಡಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ಶಾಲೆಗೆ ತೆರಳಿದ್ದ ಮಾದೇವ ನಾಯ್ಕ ದಂಪತಿ ಶಾಲೆಯ ಪಹಣಿ ಪತ್ರಿಕೆಯನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಇವರ ಕಾರ್ಯವನ್ನು ಮುಖ್ಯ ಶಿಕ್ಷಕಿ ಆಫ್ರಿನ್ ಶೇಖ, ಸಹ ಶಿಕ್ಷಕಿ ಸವಿತಾ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶ್ಲಾಘಿಸಿದ್ದಾರೆ.