ಕನ್ನಡಪ್ರಭ ವಾರ್ತೆ ಮದ್ದೂರು
ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ಆಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗಸಂಸ್ಥೆಗಳ ಬೋಧಕ- ಬೋಧಕೇತರ ಸಿಬ್ಬಂದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಂಕರ್ ಕಣ್ಣಿನ ಆಸ್ಪತ್ರೆ, ಮಧು ಜಿ. ಮಾದೇಗೌಡ ಮತ್ತು ಆಶಯ್ ಜಿ. ಮಧು ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಆರೋಗ್ಯ ಶಿಬಿರ ನಡೆಯಿತು.
ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 1 ಸಾವಿರಕ್ಕೂ ಅಧಿಕ ಜನರು ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯಕೀಯ ಸಲಹೆ- ಸೂಚನೆಗಳನ್ನು ಪಡೆದುಕೊಂಡರು. ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ರದ್ದು ಪಡಿಸಿ ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಆರೋಗ್ಯ ಶಿಬಿರಕ್ಕೆ ಗಣ್ಯರು ಚಾಲನೆ ನೀಡಿದರು.ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರೈತ ಪರ ಹೋರಾಟಗಾರ ಜಿ.ಮಾದೇಗೌಡರ ಪುತ್ರ ವಿಧಾನ ಪರಿಷತ್ ಸದಸ್ಯ ಮಧು ಅವರ ಹುಟ್ಟುಹಬ್ಬವನ್ನು ಆಡಂಬರಕ್ಕೆ ಅವಕಾಶ ನೀಡದೆ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣ ಆಚರಿಸಲಾಗುತ್ತದೆ ಎಂದರು.
ಭಾರತೀನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಟಯೋಟ ಕಂಪನಿ ಸೇರಿದಂತೆ ವಿವಿಧ ಕಂಪನಿಗಳಿಗೆ ಸುಮಾರು 800ಕ್ಕೂ ಹೆಚ್ಚು ಯುವಕ- ಯುವತಿಯರು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನೇಮಕಾತಿ ಪತ್ರಗಳನ್ನು ಸ್ಥಳದಲ್ಲೇ ನೀಡಲಾಗಿದೆ. ಅಲ್ಲದೆ ಪದವೀಧರ ಕ್ಷೇತ್ರ ವ್ಯಾಪ್ತಿಯ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರು. ಪ್ರೋತ್ಸಾಹ ಧನ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.ಅಂಗನವಾಡಿ ಮತ್ತು ಅನಾಥಶ್ರಮ ಮಕ್ಕಳಿಗೆ ಊಟದ ವ್ಯವಸ್ಥೆಗಾಗಿ ಪಡಿತರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ. ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಡಿ.28 ರಿಂದ 2 ದಿನಗಳ ಕಾಲ ಭಾರತೀನಗರದ ಭಾರತೀ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಎಂಜಿಎಂ ಕಪ್‌ನ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರೋಗ್ಯ ಶಿಬಿರದಲ್ಲಿ ಹಿರಿಯ ಹೃದಯ ರೋಗತಜ್ಞ ಡಾ.ವೆಂಕಟೇಶ್, ಎಂಡೋ ಕೈನಾಲಿಜಿ ತಜ್ಞ ಡಾ.ಮಹೇಶ್, ಸ್ತ್ರೀ ಮತ್ತು ಪ್ರಸೂತಿ ವೈದ್ಯೆ ಎಂ.ಶ್ವೇತಾ, ಸಾಮಾನ್ಯ ರೋಗ ತಜ್ಞ ಡಾ.ಜೀತೇಶ್, ಮೂಳೆರೋಗ ತಜ್ಞ ಡಾ.ಎಂ.ಪ್ರಶಾಂತ್, ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ಜಿ.ಎಸ್.ಮೌರ್ಯ, ಮೂತ್ರರೋಗ ಚಿಕಿತ್ಸಕ ಡಾ.ಅಭಿಜಿತ್, ಮೂತ್ರಪಿಂಡ ತಜ್ಞ ಡಾ.ಮನು, ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಪ್ರತೀಮ್, ದಂತ ಚಿಕಿತ್ಸಕರಾದ ಡಾ.ಶಿಲ್ಪಶ್ರೀ, ಆಸ್ಟರ್ ಮಾದೇಗೌಡ ಆಸ್ಪತ್ರೆ ಯುನಿಟೇಡ್‌ನ ಪಿ.ಎಸ್.ಗಣೇಶ್‌ಪ್ರಭು ಶಿಬಿರದಲ್ಲಿ ಪಾಲ್ಗೊಂಡಿದ್ದ ರೋಗಿಗಳನ್ನು ಪರೀಕ್ಷಿಸಿ ವೈದ್ಯಕೀಯ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ. ಗೌಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿಗೌಡ, ಭಾರತೀ ಹೆಲ್ತ್‌ಸೈನ ನಿರ್ದೇಶಕರಾದ ತಮಿಜ್‌ಮಣಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಹೇಶ್‌ಕುಮಾರ್, ಆಸ್ಪರ್ ಮಾದೇಗೌಡ ಆಸ್ಪತ್ರೆ ಮಾರ್ಕೆಟಿಂಗ್ ಮ್ಯಾನೇಜರ್ ಅನಿಲ್, ಕಾವೇರಿ ನೀರಾವರಿ ನಿಗಮದ ನಿವೃತ್ತ ಇಂಜಿನಿಯರ್ ಬಸವರಾಜೇಗೌಡ, ಮಧು ಜಿ. ಮಾದೇಗೌಡ ಅಭಿಮಾನಿ ಬಳಗದ ಆರ್.ಸಿದ್ದಪ್ಪ, ಚಿಕ್ಕಮರಿಯಪ್ಪ, ಎನ್.ಕೆ.ಭರತೇಶ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರಬಾಬು, ಸದಸ್ಯ ಎಂ.ಐ.ಪ್ರವೀಣ್, ಪಣ್ಣೇದೊಡ್ಡಿ ವಿಜೇಂದ್ರ, ಅವಿನಾಶ್, ಕೆ.ಪಿ.ಶ್ರೀಧರ್, ಸೊಳ್ಳೆಪುರ ರಮೇಶ್, ಕಬ್ಬಾಳಯ್ಯ, ನಾಗಭೂಷಣ್ ಸೇರಿದಂತೆ ಮತ್ತಿತರರಿದ್ದರು.