ಎಕ್ಸ್‌ಪ್ರೆಸ್ ಕೆನಾಲ್‌ಗೆ ಮಾಧುಸ್ವಾಮಿ ತೀವ್ರ ವಿರೋಧ

KannadaprabhaNewsNetwork |  
Published : Mar 05, 2024, 01:31 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಮುಖಂಡ, ಸಣ್ಣ ನೀರಾವರಿ ಖಾತೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಮುಖಂಡ, ಸಣ್ಣ ನೀರಾವರಿ ಖಾತೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಬ್ಬಿಯಿಂದ ಬೈಪಾಸ್ ಮಾಡಿ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಲಿದೆ. ಹಾಲಿ ಇರುವ ನಾಲೆಯ ಮೂಲಕ ನಿಗದಿಪಡಿಸಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ತರಕಾರು ಇಲ್ಲ ಎಂದರು.

ಈ ಹಿಂದೆ ನಾನು ಜಿಲ್ಲಾ ಉಸ್ತುವಾರಿಯ ಜೊತೆಗೆ, ಸಣ್ಣ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಅನುಮೋದನೆಯಾಗಿದ್ದ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಗೆ ಪ್ರತಿ ಪಕ್ಷ ಮತ್ತು ಆಡಳಿತ ಪಕ್ಷದ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಲ್ಲದೆ ಡಾ.ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಕೆ.ಡಿ.ಪಿ. ಸಭೆಯ ಒಕ್ಕೊರಲ ನಿರ್ಣಯದಂತೆ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೊಗುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದು ಪಡಿಸಲಾಗಿತ್ತು ಎಂದರು.

ಆದರೆ ಹೊಸ ಸರಕಾರ ಬಂದನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಹಾಗೂ ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್.ಡಿ. ರಂಗನಾಥ್ ಅವರು ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲೆಯ ಇತರೆ ತಾಲೂಕುಗಳಿಗೆ ಅನ್ಯಾಯವಾಗುವುದನ್ನು ಲೆಕ್ಕಿಸದೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.ಒಂದು ವೇಳೆ ನಮ್ಮ ವಿರೋಧದ ನಡುವೆಯೂ ಯೋಜನೆ ಕೈಗೆತ್ತಿಕೊಂಡರೆ ಅನಿವಾರ್ಯವಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗುವುದಾಗಿ ಜೆ.ಸಿ. ಮಾಧುಸ್ವಾಮಿ ನುಡಿದರು.

ಹೇಮಾವತಿ ಯೋಜನೆಯಿಂದ ಜಿಲ್ಲೆಗೆ ಹಂಚಿಕೆಯಾಗಿರುವ 24.8 ಟಿ.ಎಂ.ಸಿ ನೀರಿನ ಸಂಪೂರ್ಣ ಬಳಕೆಗೆ ಯೋಜನೆ ರೂಪಿಸಿದ್ದು, ಹೆಚ್ಚುವರಿ ನೀರಿಲ್ಲ.ಹಾಗಿದ್ದಮೇಲೆ ಯಾವ ಆಧಾರದಲ್ಲಿ ಈ ಯೋಜನೆ ರೂಪಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಲವಾರು ಎಂ.ವಿ.ಸಿ.(ಬಹುಗ್ರಾಮ ಕುಡಿಯುವ ನೀರಿನ ಯೋಜನೆ)ಗಳು ನೀರಿನ ಲಭ್ಯತೆ ಇಲ್ಲದೆ ಸೊರಗುತ್ತಿವೆ. ಬೆಳ್ಳಾವಿ ಏತ ನೀರಾವರಿ ಇನ್ನೂ ಆರಂಭವೇ ಆಗಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯದಿಂದ ನಾವು ನೀರು ತೆಗೆದುಕೊಂಡು ಹೋಗುತ್ತವೆ ಎಂದರೆ, ಇದನ್ನು ಜಿಲ್ಲೆಯ ಪ್ರತಿಯೊಬ್ಬರೂ ಪಕ್ಷಭೇಧ ಮರೆತು ವಿರೋಧಿ ಸಬೇಕಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ಅವರಿಗೂ ಈ ಯೋಜನೆಯ ಬಗ್ಗೆ ಸಹಮತವಿಲ್ಲ. ಆದರೆ ಅವರ ದ್ವನಿಗೆ ಶಕ್ತಿ ಸಾಲದಾಗಿದೆ. ಹೇಮಾವತಿ ನೀರು ನಂಬಿಯೇ ಜಿಲ್ಲೆಯಲ್ಲಿ ನೂರಾರು ಕೋಟಿ ರು. ಖರ್ಚು ಮಾಡಿ ಜಲಜೀವನ್ ಮೀಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕುಣಿಗಲ್ ತಾಲೂಕಿಗೆ ಹೇಮಾವತಿ ಯೋಜನೆಯಲ್ಲಿ 2 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಕುಣಿಗಲ್ ದೊಡ್ಡ ಕೆರೆ, ಮಾರ್ಕೋನಹಳ್ಳಿ ಜಲಾಶಯ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ನಮಗೆ ರಾಜಕೀಯ ಶಕ್ತಿ ಇದೆ ಎಂದು ತಮ್ಮ ಸ್ವಾರ್ಥಕ್ಕೆ ಇಡೀ ಜಿಲ್ಲೆಗೆ ಮೋಸ ಮಾಡುವುದು ಸರಿಯಲ್ಲ.ಸಾಯುವವರೆಗೂ ರಾಜಕಾರಣ ಮಾಡಲು ಸಾಧ್ಯವಿಲ್ಲ.ಇದನ್ನು ಅಧಿಕಾರದಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಾತಿಗಣತಿ ಅವೈಜ್ಞಾನಿಕ:

ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿರುವ ಆರ್ಥಿಕ, ಸಾಮಾಜಿಕ ಸಮೀಕ್ಷೆ (ಜಾತಿಗಣತಿ) ಅವೈಜ್ಞಾನಿಕವಾಗಿದೆ. ನಾವೆಲ್ಲರೂ ಮತಾಂತರಗೊಂಡ ಲಿಂಗಾಯಿತರು, ಮೂಲದಲ್ಲಿ ಯಾವುದೋ ಕಸುಬು ಮಾಡುತ್ತಾ ಜೀವನ ಮಾಡುತ್ತಿದ್ದವರು. ನೂರಾರು ವರ್ಷಗಳ ನಂತರ ನೀವು ಮೀಸಲಾತಿಗಾಗಿ ನಿಮ್ಮ ಮೂಲಕ ಜಾತಿಗೆ ಹೋಗಿ ಎನ್ನುವುದಾದರೆ ಹೇಗೆ ಸಾಧ್ಯ. ಅಲ್ಲದೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ದೂರುಗಳು ಸಾಕಷ್ಟಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿಯೇ ನಮ್ಮ ಸರ್ಕಾರವಿದ್ದಾಗ ಶೇ 18ರಷ್ಟಿದ್ದ ಅವರ ಮೀಸಲಾತಿ ಪ್ರಮಾಣವನ್ನು ಶೇ.೨೪ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಜೆ.ಸಿ. ಮಾಧುಸ್ವಾಮಿ ನುಡಿದರು.ಈ ವೇಳೆ ಪಕ್ಷದ ಮುಖಂಡರಾದ ಎಂ.ಬಿ. ನಂದೀಶ್, ದಿಲೀಪ್, ಟಿ.ಆರ್.ಸದಾಶಿವಯ್ಯ, ರಂಗಾನಾಯಕ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!