ದ್ವೈತ ಸಿದ್ಧಾಂತದ ಪ್ರತಿಪಾದಕ ಜಗದ್ಗುರು ಶ್ರೀಮದ್ ಮಧ್ವಾಚಾರ್ಯರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ತಾತ್ವಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ. ಅವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ದ್ವೈತ ಸಿದ್ಧಾಂತದ ಪ್ರತಿಪಾದಕ ಜಗದ್ಗುರು ಶ್ರೀಮದ್ ಮಧ್ವಾಚಾರ್ಯರು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ತಾತ್ವಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ. ಅವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಗದ್ಗುರು ಶ್ರೀಮದ್ ಮಧ್ವಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧ್ವಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅವರ ಜೀವನ, ಸಾಧನೆ ಹಾಗೂ ತತ್ವಚಿಂತನೆಗಳನ್ನು ಸ್ಮರಿಸಲಾಯಿತು.
ಸರ್ಕಾರದಿಂದ ಮಧ್ವಾಚಾರ್ಯರ ಜಯಂತಿ ಆಚರಿಸುತ್ತಿರುವುದು ವಿಪ್ರ ಸಮಾಜದವರಿಗೆ ಸಂತೋಷದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಹಾನ್ ದಾರ್ಶನಿಕರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತವೆ. ಅವರ ತತ್ವಗಳು ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್ ಅವರು ಮಾತನಾಡಿ, ಜಗದ್ಗುರು ಶ್ರೀಮದ್ ಮಧ್ವಾಚಾರ್ಯರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಇಂತಹ ಮಹನೀಯರ ಜಯಂತಿ ಆಚರಣೆಗಳು ಅವರ ಕೊಡುಗೆಗಳನ್ನು ಸ್ಮರಿಸುವುದರ ಜತೆಗೆ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಪ್ರ ಸಮಾಜದ ಮುಖಂಡರು ಹಾಗೂ ಗಣ್ಯರಿಗೆ ಶುಭಾಶಯ ಕೋರಿದರು.
ಜಯಂತ್ಯುತ್ಸವದಲ್ಲಿ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಧಾರ್ಮಿಕ ಪರಂಪರೆ ಮತ್ತು ಮಹಾನ್ ದಾರ್ಶನಿಕರ ಸಂದೇಶಗಳನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಂಡಿತ್ ರಾಘವೇಂದ್ರ ಆಚಾರ್ ಜೋಶಿ, ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ನಾರಾಯಣ್, ವಕೀಲರಾದ ನರಸಿಂಗರಾವ್ ಕಿಣಿಕೇರಿ, ದಿನೇಶ್ ವಿ. ಸಿ., ಆನಂದ್ ಗೋರ್ಕಲ್, ವಿಜಯ್ ಕುಮಾರ್ ತಾತಳಗೇರಿ, ಸುಧಾಕರ್ ಕುಲಕರ್ಣಿ, ಶ್ರೀನಿವಾಸ್, ನಾಗೇಶ್ ಬಿಂದುರಾವ್, ವೆಂಕೋಬರಾವ್, ಪ್ರವೀಣ್ ದೇಶಮುಖ, ಸತೀಶ್ ಕುಲಕರ್ಣಿ, ಅಶೋಕ್ ಮೂಕಿಹಾಳ, ವೆಂಕಟೇಶ್ ಮೂಕಿಹಾಳ, ವಾದಿರಾಜಾಚಾರ್ಯ, ಶ್ರೀಕಾಂತ ಆಚಾರ್ಯ, ಶ್ರೀನಿವಾಸ್ ರಾವ್ ಕುಲಕರ್ಣಿ, ಬದ್ರಿ ನಾರಾಯಣಚಾರ್ , ವೇಣುಗೋಪಾಲ್ ಹುದ್ದಾರ್, ಆನಂದ್ ಕುಲಕರ್ಣಿ ಸೇರಿದಂತೆ ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.