ಸಮೀಕ್ಷೆ ವೇಳೆ ಮಾದಿಗರು ಜಾಗೃತಿ ವಹಿಸಬೇಕಿದೆ

KannadaprabhaNewsNetwork | Published : Apr 4, 2025 12:49 AM

ಸಾರಾಂಶ

ಒಳಮೀಸಲಾತಿಗೆ ಸಂಬಂಧಿಸಿದಂತೆ ಏಂಪಾರಿಕಲ್ ಡೇಟಾ ಸಂಗ್ರಹಕ್ಕೆ ನ್ಯಾ.ನಾಗಮೋಹನ್‌ದಾಸ್ ಸಮಿತಿ ಶೀಘ್ರದಲ್ಲಿಯೇ ಸಮೀಕ್ಷೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ಸೇರಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಒಳಮೀಸಲಾತಿಗೆ ಸಂಬಂಧಿಸಿದಂತೆ ಏಂಪಾರಿಕಲ್ ಡೇಟಾ ಸಂಗ್ರಹಕ್ಕೆ ನ್ಯಾ.ನಾಗಮೋಹನ್‌ದಾಸ್ ಸಮಿತಿ ಶೀಘ್ರದಲ್ಲಿಯೇ ಸಮೀಕ್ಷೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ಸೇರಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.ನ್ಯಾ.ನಾಗಮೋಹನ್ ದಾಸ್ ಸಮಿತಿಯ ಮದ್ಯಂತರ ವರದಿಯ ಶಿಫಾರಸ್ಸಿನಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಹೊಸದಾಗಿ ಏಂಪಾರಿಕಲ್ ಡೇಟಾ ಸಂಗ್ರಹಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮಾದಿಗ ಸಮುದಾಯದ ಮುಖಂಡರು, ಹೋರಾಟಗಾರರು,ಯುವಜನರು ಸಕ್ರಿಯವಾಗಿ ಪಾಲ್ಗೊಂಡು, ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಮೂಲಕ ಎಕೆ, ಎಡಿ, ಎಎ ಇರುವ ಕಲಂಗಳಲ್ಲಿ ಸಂಬಂಧಪಟ್ಟ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸುವ ಮೂಲಕ ಅಂತಿಮ ಹಂತದ ಹೋರಾಟವನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.ನಿವೃತ್ತ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಮಾದಿಗ ಸಮುದಾಯಕ್ಕೆ ಇದೊಂದು ಸುವರ್ಣ ಅವಕಾಶ ನ್ಯಾ.ನಾಗಮೋಹನದಾಸ್ ಸಮಿತಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಜಾತಿ, ಉಪಜಾತಿ ಸಮೀಕ್ಷೆ ನಡೆಸಿದ್ದಾರೆಯೇ ಇಲ್ಲವೇ ಎಂಬುದನ್ನು ಕಾವಲು ನಾಯಿಯಂತೆ ಕಾಯುವ ಕೆಲಸ ಮಾದಿಗ ಸಮುದಾಯದ ಮುಖಂಡರ ದ್ದಾಗಿದೆ. ಸಮೀಕ್ಷೆಯ ವೇಳೆ ಮಾದಿಗರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆಯಬಹುದು ಎಂಬ ಅನುಮಾನ, ಆಂತಕ ನಮ್ಮಲ್ಲಿದೆ. ಹಾಗಾಗಿ ಸಮೀಕ್ಷೆ ನಡೆಯುವ ಅಷ್ಟು ದಿನ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಜನರು ತಮ್ಮ ಉಪಜಾತಿ ಕಲಂನಲ್ಲಿ ಮಾದಿಗ ಎಂದಷ್ಟೇ ನಮೂದಿಸಬೇಕು. ಅಲ್ಲದೆ ಪ್ರತಿ ಮನೆಯ ಯಜಮಾನನ ಸಹಿ ಇಲ್ಲವೇ, ಹೆಬ್ಬೇರಳಿನ ಅಚ್ಚು ಪಡೆಯುವಂತೆ ಸಮಿತಿಯ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು. ಇದನ್ನು ಕ್ರಾಸ್‌ಚೆಕ್ ಮಾಡುವ ಜವಾಬ್ದಾರಿಯನ್ನು ವಿದ್ಯಾವಂತ ಮಾದಿಗ ಯುವಜನರು ಹೊರಬೇಕೆಂದರು.

ಸಮೀಕ್ಷೆ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಹೆಸರಿನಲ್ಲಿ ಒಂದು ಲಕ್ಷ ಕರ ಪತ್ರ ಮುದ್ರಿಸಿ, ಸಮೀಕ್ಷೆಗೆ ಮನೆಯ ಬಳಿ ಅಧಿಕಾರಿಗಳು ಬಂದಾಗ ಯಾವ ರೀತಿ ನಡೆದುಕೊಳ್ಳಬೇಕು. ಯಾವ ಯಾವ ಕಲಂಗಳಲ್ಲಿ ಯಾವ ಮಾಹಿತಿ ತುಂಬಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು. ಈ ಕರಪತ್ರ ಜಿಲ್ಲೆಯ ಪ್ರತಿ ಮಾದಿಗ ಸಮುದಾಯದ ಮನೆಗೆ ತಲುಪುವಂತೆ ನೋಡಿಕೊಳ್ಳಬೇಕು. ಇದು ಪಕ್ಷಾತೀತ ಮತ್ತು ವ್ಯಕ್ತಿ ಕೇಂದ್ರಿತವಲ್ಲದ ಆಂದೋಲನವಾಗಬೇಕು ಎಂದರು.

ಮುಖಂಡರಾದ ಕೇಶವಮೂರ್ತಿ ಮಾತನಾಡಿ, ಒಳಮೀಸಲಾತಿಗೆ ಸಂಬಂಧಿಸಿದಂತೆ 3 ದಶಕಗಳ ಹೋರಾಟ ಒಂದೆಡೆ ಯಾದರೆ, ಸಮೀಕ್ಷೆ 10 ದಿನಗಳು ಮಾದಿಗ ಸಮುದಾಯದ ಪಾಲಿಗೆ ಒಂದು ಹೋರಾಟವೇ ಆಗಿದೆ.ಈ ಸಮಯದಲ್ಲಿ ಮೈಮರೆತರೆ ನಮ್ಮ ಮುಂದಿನ ಪೀಳಿಗೆಗೆ ಮೋಸ ಮಾಡಿದಂತೆ. ಈ ಸಮಯ ಎಚ್ಚೆತ್ತು ಕೆಲಸ ಮಾಡಿದರೆ ಮುಂದಿನ ಪೀಳಿಗೆ ಎಕೆ, ಎಡಿ, ಎಎ ಯಂತಹ ಗೊಂದಲಗಳಿಲ್ಲದೆ ಸರಕಾರದ ಸವಲತ್ತುಗಳನ್ನು ಪಡೆದು ಬದುಕು ನಡೆಸಬಹುದು ಎಂದರು.ಹಿರಿಯರಾದ ಕೆ.ದೊರೆರಾಜು ಮಾತನಾಡಿ, ಮಾದಿಗರು ತಮ್ಮ ನಿಖರವಾದ ಜನಸಂಖ್ಯೆಯನ್ನು ಸರಕಾರದ ಮುಂದಿಡಲು ಇದೊಂದು ಸುಸಮಯ.ಹಾಗಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು, ಸಮೀಕ್ಷೆಯನ್ನು ಯಶಸ್ವಿ ಮಾಡೋಣ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ, ಅದರ ಅಡಿಯಲ್ಲಿ ತಾಲೂಕು ಸಮಿತಿಗಳನ್ನು ಮಾಡಿ,ಯಾರೊಬ್ಬರು ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಬೇಕಾಗಿದೆ.ಯಾರು ಸಹ ಅನ್ಯತಾ ಭಾವಿಸದೆ ತಮ್ಮ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮೀಕ್ಷೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು.ಆ ಮೂಲಕ ಸಮಾಜ ಕಟ್ಟುವ, ದೇಶ ಕಟ್ಟುವ ಕೆಲಸ ಮಾಡಬೇಕೆಂದರು. ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ,ಪಿ.ಎನ್.ರಾಮಯ್ಯ, ಕೊಟ್ಟ ಶಂಕರ್,ಮಧುಗಿರಿ ನರಸಿಂಹಯ್ಯ, ಕೇಬಲ್ ರಘು, ಮೋಹನ್ ಕುಮಾರ್, ನರಸಿಂಹಮೂರ್ತಿ,ಕೆಂಪರಾಜು, ಕೊಡಿಯಾಲ ಮಹದೇವ್,ಗೂಳರಿಮೆ ನಾಗರಾಜು ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ವೇಳೆ ಬಾಬು ಜಗಜೀವನ್‌ರಾಂ ಪ್ರಶಸ್ತಿ ಪಡೆದ ಹಿರಿಯ ಚಿಂತಕ ಕೆ.ದೊರೆರಾಜು ಅವರನ್ನು ಅಭಿನಂದಿಸಲಾಯಿತು.

ಸಾಕಷ್ಟು ಚರ್ಚೆಯ ನಂತರ ಡಾ.ವೈ.ಕೆ.ಬಾಲಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಿದ್ದು,ಜಿಲ್ಲಾ ಸಮಿತಿಗೆ ತಿಪಟೂರಿನಿಂದ ಶಾಂತಪ್ಪ,ಡಿ.ಕೆ.ಕುಮಾರ್, ಗುಬ್ಬಿಯಿಂದ ಕೊಡಿಯಾಲ ಮಹದೇವ್ ಮತ್ತು ಜಗದೀಶ್,ತುಮಕೂರು ಗ್ರಾಮಾಂತರದಿಂದ ನಾಗರಾಜು ಗೂಳರಿವೆ ಮತ್ತು ಯೋಗೀಶ್ ಸೋರೆಕುಂಟೆ, ತುಮಕೂರು ನಗರದಿಂದ ಕೇಬಲ್ ರಘು, ಪಿ.ಎನ್.ರಾಮಯ್ಯ,ಕೊರಟಗೆರೆಯಿಂದ ಗಂಗಣ್ಣ, ಸಿದ್ದಗಂಗಯ್ಯ, ಶಿರಾದಿಂದ ಸಣ್ಣಬೂತಯ್ಯ, ಕೊಟ್ಟಶಂಕರ್, ತುರುವೇಕೆರೆ ಯಿಂದ ಗಂಗಾಧರ್ ಬಾಣಸಂದ್ರ, ಮೂರ್ತಿ, ಚಿ.ನಾ.ಹಳ್ಳಿ ಲಿಂಗದೇವರು, ಚನ್ನಬಸವಯ್ಯ, ಕುಣಿಗಲ್ ಶಿವಶಂಕರ್, ಶ್ರೀನಿವಾಸ್, ಮಧುಗಿರಿ ನರಸಿಂಹಯ್ಯ, ದೊಡ್ಡೇರಿ ಕಣಿಮಯ್ಯ, ಪಾವಗಡದಿಂದ ರಮೇಶ್ ಮತ್ತು ನಾರಾಯಣ ಅವರುಗಳನ್ನು ಒಳಗೊಂಡ ಸಮಿತಿ ರಚಿಸಲಾಯಿತು.

Share this article