ಮಡಿಕೇರಿ: ಕನ್ನಡದ ಮೊದಲ ನಾಡಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ ನೂರು ವರ್ಷ ತುಂಬಿರುವ ಹಿನ್ನಲೆಯಲ್ಲಿ ಕೊಡಗು ಪತ್ರಕರ್ತರ ಸಂಘದಿಂದ ಮುಳಿಯ ಚಿನ್ನಾಭರಣ ಸಂಸ್ಥೆಯ ಸಹಯೋಗದಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’- ಗೀತಗಾಯನ ಕಾರ್ಯಕ್ರಮ 23ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮಕ್ಕೆ ಮುಳಿಯ ಚಿನ್ನಾಭರಣ ಸಂಸ್ಥೆ ಸಹಯೋಗ ನೀಡಿದ್ದು 3 ಗಂಟೆ ಅವಧಿಯ ಕನ್ನಡ ಗೀತೆಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ 33 ಗಾಯಕ, ಗಾಯಕಿಯರು ಹಾಡಲಿದ್ದಾರೆ ಎಂದರು. 1924 ರಲ್ಲಿ ಕನ್ನಡದ ಹೆಸರಾಂತ ಕವಿ, ಸಾಹಿತಿ ಹುಯಿಲಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಸಮ್ಮುಖದಲ್ಲಿ ಹಾಡಲ್ಪಟ್ಟು ಕನ್ನಡದ ಮೊದಲ ನಾಡಗೀತೆ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಆ ಅಪೂರ್ವ ಹಾಡಿನ ಶತಸಂಭ್ರಮವನ್ನೂ ಮಡಿಕೇರಿಯಲ್ಲಿ ಗೀತಗಾಯನಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಗಾಯನ ಕಾಯ೯ಕ್ರಮದ ಮೂಲಕ ಹೆಚ್ಚಿನ ಸಾಹಿತ್ಯಾಸಕ್ತರನ್ನು ತಲುಪುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.