ಕನ್ನಡಪ್ರಭ ವಾರ್ತೆ ಮಡಿಕೇರಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಪ್ರಯುಕ್ತ ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದ ವರೆಗೆ ಏಕತಾ ಯಾತ್ರೆ ನಡೆಸಿ, ರಾಷ್ಟ್ರದ ಏಕತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿಯನ್ನು ಉದ್ದೀಪಿಸುವುದೇ ಏಕತಾ ನಡಿಗೆಯ ಉದ್ದೇಶವಾಗಿದೆ. ಅಖಂಡ ಭಾರತ ನಿರ್ಮಾಣಕ್ಕಾಗಿ ವಿಶೇಷ ಪ್ರಯತ್ನ ಮಾಡಿದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವಾಗಿ ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಅ.೨೫ರ ವರೆಗೆ ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ದೇಶದ ಜನರನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಮತ್ತು ಕಬಡ್ಡಿ ಪಂದ್ಯಗಳನ್ನು ಆಯೋಜಿಸಲು ಕರೆಕೊಟ್ಟ ಪಟೇಲರು, ಅಖಂಡ ಭಾರತ ನಿರ್ಮಿಸಲು ಚಿಂತಿಸಿದ್ದರು. ಆದರೆ, ಕೆಲವರ ದುರಾಸೆಯಿಂದಾಗಿ ಭಾರತ ವಿಭಜನೆಯಾಗಬೇಕಾಯಿತು ಎಂದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ರವಿ ಕುಶಾಲಪ್ಪ, ಬಿ.ಬಿ.ಭಾರತೀಶ್ ಮುಖಂಡರಾದ ವಿ.ಕೆ. ಲೋಕೇಶ್, ಬಿ.ಬಿ. ಭಾರತೀಶ್, ಅನಿತಾ ಪೂವಯ್ಯ, ತಳೂರು ಕಿಶೋರ್, ನಾಗೇಶ್ ಕುಂದಲ್ಪಾಡಿ, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಉಮೇಶ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು, ವಿವಿಧ ಘಟಕಗಳ ಪ್ರಮುಖರು ಪಾಲ್ಗೊಂಡಿದ್ದರು.