ಮಡಿಕೇರಿ ದಸರಾ ಕರಗ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Oct 12, 2026, 02:45 AM IST
ಚಿತ್ರ:  11ಎಂಡಿಕೆ3 : ಮಡಿಕೇರಿ ದಸರಾ ಕಗರಗಳಿಗೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ವಿಶೇಷ ಪೂಜೆ.  | Kannada Prabha

ಸಾರಾಂಶ

ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಕರಗ ಉತ್ಸವಕ್ಕೆ ನಗರದ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಭಾನುವಾರ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಿತು.

ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಕರಗ ಉತ್ಸವಕ್ಕೆ ನಗರದ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಭಾನುವಾರ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಿತು.

ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಚಾಲನೆ ನೀಡಿದರು. ನಗರದ ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಬಿಂಬಗಳು ಪುಷ್ಪಾಲಂಕೃತವಾಗಿ ಭಕ್ತರ ಜಯಘೋಷದೊಂದಿಗೆ ಮರೆವಣಿಗೆ ಆರಂಭಿಸಿದವು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ದೇವತೆಗಳ ಕರಗಗಳು ಮೆರವಣಿಗೆ ಹೊರಟವು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪೂಜೆಯ ನಂತರ ಆರಂಭವಾಗಿರುವ ಕರಗಗಳು ನಗರ ಪ್ರದಕ್ಷಿಣೆ ಇನ್ನು 9 ದಿನಗಳ ಕಾಲ ಮುಂದುವರಿಯಲಿದೆ. ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಿಂದ ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ದೇವಾಲಯದಿಂದ ಜಿಜೇಶ್, ಕೋಟೆ ಮಾರಿಯಮ್ಮ ದೇವಾಲಯದಿಂದ ಪ್ರಜ್ವಲ್ ಹಾಗೂ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಿಂದ ಗಿರೀಶ್ ಎಂಬುವವರು ಕರಗ ಹೊತ್ತಿದ್ದಾರೆ.

ಕರಗ ಪೂಜೆ ಸಂದರ್ಭದಲ್ಲಿ ಶಾಸಕರಾದ ಡಾ. ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸೂರಜ್, ಪೌರಾಯುಕ್ತರಾದ ಎಚ್.ಆರ್.ರಮೇಶ್ ದಸರಾ ಸಮಿತಿ ಪ್ರಮುಖರಾದ ಅರುಣ್ ಕುಮಾರ್, ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ಪ್ರಕಾಶ್ ಆಚಾರ್ಯ, ಟಿ.ಪಿ.ರಮೇಶ್, ಅನಂತ ಶಯನ, ಜಿ.ಚಿದ್ವಿಲಾಸ್, ಅನಿಲ್ ಎಚ್ ಟಿ, ರಮೇಶ್, ಚುಮ್ಮಿ ದೇವಯ್ಯ, ದೇವಾಲಯ ಸಮಿತಿ ಪ್ರಮುಖರು ಇದ್ದರು.

ಇಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮ: ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೋಮವಾರದಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮೂಡಿಬರಲಿದೆ.

ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಲರವಗಳು ಮೂಡಿಬರಲಿದ್ದು, 21ರವರೆಗೂ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ಕ್ಕೆ ನಟೇಶ ನೃತ್ಯ ಶಾಲೆ, ಮದೆನಾಡು ತಂಡದಿಂದ ಶಾಸ್ತ್ರೀಯ ನೃತ್ಯ, ಮೈಸೂರಿನ ಆಕಾಶ್ ಮತ್ತು ತಂಡದಿಂದ ರಸಮಂಜರಿ, ಕುಶಾಲನಗರದ ನಟರಾಜ ಸಂಗೀತ ನೃತ್ಯ ಕಲಾ ಕೇಂದ್ರದಿಂದ ನೃತ್ಯ ವೈವಿಧ್ಯ ಮೈಸೂರಿನ ಡಾ.ಕಾ. ರಾಮೇಶ್ವರಪ್ಪ ಮತ್ತು ತಂಡದಿಂದ ಶಾಸ್ತ್ರೀಯ ಗಾಯನ ಮತ್ತು ಇತರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಲಾಗ್ರಿಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ
ಸಿಎಂ ಮಂಗಳೂರು, ಉಡುಪಿ ಪ್ರವಾಸ ರದ್ದು