ಮಡಿಕೇರಿ ದಸರಾ: ನಾಳೆ ದಶಮಂಟಪ ಶೋಭಾಯಾತ್ರೆ ವೈಭವ

KannadaprabhaNewsNetwork |  
Published : Oct 11, 2024, 11:51 PM IST
10ಎಂಡಿಕೆ5 : ದಶಮಂಪಟ ಶೋಭಾಯಾತ್ರೆ(ಫೈಲ್ ಫೋಟೋ) | Kannada Prabha

ಸಾರಾಂಶ

ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ಕಾರ್ಯಕ್ರಮ ಶನಿವಾರ ರಾತ್ರಿ ಆರಂಭಗೊಳ್ಳಲಿದ್ದು, ಈಗಾಗಲೇ ಹತ್ತು ಮಂಟಪಗಳು ಕೂಡ ಅಂತಿಮ ತಯಾರಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ಕಾರ್ಯಕ್ರಮ ಶನಿವಾರ ರಾತ್ರಿ ಆರಂಭಗೊಳ್ಳಲಿದ್ದು, ಈಗಾಗಲೇ ಹತ್ತು ಮಂಟಪಗಳು ಕೂಡ ಅಂತಿಮ ತಯಾರಿಯಲ್ಲಿದೆ.

ಪೇಟೆ ಶ್ರೀ ರಾಮಮಂದಿರ, ಕೋಟೆ ಮಹಾ ಗಣಪತಿ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋಟೆ ಮಾರಿಯಮ್ಮ, ಕೋದಂಡ ರಾಮ, ಚೌಡೇಶ್ವರಿ, ಕರವಲೆ ಭಗವತಿ, ದೇಚೂರು ಶ್ರೀ ರಾಮ ಮಂದಿರ ದೇವಾಲಯದ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

ಶನಿವಾರ ರಾತ್ರಿ 9 ಗಂಟೆಯಿಂದ ಶೋಭಾಯಾತ್ರೆ ಆರಂಭವಾಗಿ ಭಾನುವಾರ ಮುಂಜಾನೆ ವರೆಗೂ ನಡೆಯಲಿದೆ. ಒಂದೊಂದು ಮಂಟಪಗಳು ಕೂಡ ವಿಭಿನ್ನ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿದ್ದು, ದೇವಾನುದೇವತೆಗಳ ಚಲನವಲನ ಇರಲಿದೆ. ಇದಕ್ಕಾಗಿ ಮಡಿಕೇರಿಗೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷಿಯಿದೆ.

ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆಯಲಿರುವ ಮಂಟಪಗಳ ಶೋಭಾಯಾತ್ರೆ ಸುಸೂತ್ರವಾಗಿ ನೆರವೇರಲು ಒಟ್ಟು ಸುಮಾರು 2,000 ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

80 ಪಿಎಸ್‌ಐ, 126 ಎಎಸ್‌ಐ, 975 ಕಾನ್ಸ್‌ಸ್ಟೇಬಲ್‌ ಹಾಗೂ ಹೆಡ್‌ ಕಾನ್ಸ್‌ಟೇಬಲ್ಸ್‌, 360 ಹೋಂ ಗಾರ್ಡ್ಸ್ ಸೇರಿದಂತೆ ಒಟ್ಟು 2,000 ಪೊಲೀಸ್ ಸಿಬ್ಬಂದಿ, ಮಡಿಕೇರಿ, ಗೋಣಿಕೊಪ್ಪ ದಸರಾದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಿದ್ದಾರೆ. ಕಳೆದ ದಸರಾದಲ್ಲಿ ನಡೆದಂತಹ ಸಣ್ಣಪುಟ್ಟ ಲೋಪಗಳನ್ನು ಈ ಬಾರಿ ಸರಿಪಡಿಸಿಕೊಂಡು ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಮಡಿಕೇರಿ ದಸರಾಗೆ 1.5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ, ಟ್ರಾಫಿಕ್ ನಿರ್ವಹಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚಿಸಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಗರದಲ್ಲಿನ ನಿರ್ಜನ ಪ್ರದೇಶಗಳಲ್ಲಿ, ಹೆಚ್ಚಾಗಿ ಹೊರವಲಯದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಜೀಪ್ ಹಾಗೂ ಚೀತಾ ದ್ವಿಚಕ್ರ ವಾಹನಗಳನ್ನು ಪೊಲೀಸ್ ಸಿಬ್ಬಂದಿ ಬಳಸಿ ಗಸ್ತು ನಡೆಸಲಿದ್ದಾರೆ. ಶೋಭಾಯಾತ್ರೆ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು, ಸುರಕ್ಷತಾ ದೃಷ್ಟಿಯಿಂದ ಹಳೆಯ ಮತ್ತು ಸುರಕ್ಷಿತವಲ್ಲದ ಕಟ್ಟಡ ಏರದಂತೆ ಎಸ್ಪಿ ಮನವಿ ಮಾಡಿದ್ದಾರೆ. ಕಟ್ಟಡದ ಮಾಲೀಕರು ಕೂಡ ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು.

ಗೋಣಿಕೊಪ್ಪ ದಸರಾದಲ್ಲಿಯೂ ಹೆಚ್ಚಿನ ಜನ ಸೇರುವುದರಿಂದ ವಿಜಯದಶಮಿಯಂದು ಸಂಜೆ 6 ರಿಂದ ಮುಂದಿನ ದಿನ ಬೆಳಿಗ್ಗೆ 6 ಗಂಟೆಯವರೆಗೆ ಸಂಚಾರಿ ವ್ಯವಸ್ಥೆಯಲ್ಲಿ ನಿಯಂತ್ರಣ ಮಾಡಲಾಗುವುದು. ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ 11 ಕಡೆಗಳಲ್ಲಿ ಚೆಕ್‌ಪೋಸ್ಟ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

..................................

ದಶಮಂಟಪಗಳ ತೀರ್ಪಿನ ಸಮಯ

(ಅ.12ರ ರಾತ್ರಿ 10 ಗಂಟೆಯಿಂದ 13ರ ಮುಂಜಾವಿನ ವರೆಗೆ)

ಮಂಟಪ........ ಸಮಯ............ ಸ್ಥಳ

ಪೇಟೆ ಶ್ರೀ ರಾಮಮಂದಿರ- ರಾತ್ರಿ 10- ಗಾಂಧಿ ಮೈದಾನ

ದೇಚೂರು ಶ್ರೀ ರಾಮಮಂದಿರ- ರಾತ್ರಿ 11- ನಗರಸಭೆ ಮುಂಭಾಗ

ದಂಡಿನ ಮಾರಿಯಮ್ಮ- ಮುಂಜಾವು 2.50- ಕೊಡವ ಸಮಾಜ ಮುಂಭಾಗ

ಚೌಡೇಶ್ವರಿ- ರಾತ್ರಿ 11.40- ಹೋಟೆಲ್ ಪಾಪ್ಯುಲರ್ ಮುಂಭಾಗ

ಕಂಚಿ ಕಾಮಾಕ್ಷಿ- ಮುಂಜಾವು 3.25- ವಿನೋದ್ ಮೆಡಿಕಲ್ ಮುಂಭಾಗ

ಚೌಟಿ ಮಾರಿಯಮ್ಮ- ಮುಂಜಾವು 4- ಕಾವೇರಿ ಕಲಾಕ್ಷೇತ್ರ ಮುಂಭಾಗ

ಕೋದಂಡ ರಾಮ- ಮುಂಜಾವು 1- ಮೆಟ್ರೋ ಫ್ರೆಷ್ ಮುಂಭಾಗ

ಕೋಟೆ ಮಾರಿಯಮ್ಮ- ಮುಂಜಾವು 1.35- ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಮುಂಭಾಗ

ಕೋಟೆ ಗಣಪತಿ- ರಾತ್ರಿ 12.20- ನಗರ ಪೊಲೀಸ್ ಠಾಣೆ ಮುಂಭಾಗ

ಕರವಲೆ ಭಗವತಿ- ಮುಂಜಾವು 2.10- ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌