ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಾ. 25, 26 ಮತ್ತು 27ರಂದು ಮಡಿಕೇರಿ ನಗರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ 36ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಾ. 25, 26 ಮತ್ತು 27ರಂದು ಮಡಿಕೇರಿ ನಗರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ 36ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ.ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರು ‘ಸರ್ವೇಜನಾ: ಸುಖಿನೋಭವಂತು’ ಆದರ್ಶದಡಿ ಸರ್ವ ಸಮುದಾಯಗಳು ಒಗ್ಗೂಡಿ ಮೂರು ದಿನಗಳ ರಾಮೋತ್ಸವ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ಯಶಸ್ವಿಗೊಳಿಸುವುದಾಗಿ ತಿಳಿಸಿದರು. ಈ ಬಾರಿ ಕೂಡ ದಾನಿಗಳು ಸೇರಿದಂತೆ ಸರ್ವರ ಸಹಕಾರದಿಂದ ರಾಮೋತ್ಸವ ಸಡಗರದಿಂದ ನಡೆಯಲಿದ್ದು, ಸುಮಾರು 30ಲಕ್ಷ ರು. ಖರ್ಚಾಗಲಿದೆ ಎಂದರು. ಮಾ.25 ರಂದು ಸಂಜೆ 6 ಗಂಟೆಗೆ ನಗರದಲ್ಲಿ ಶ್ರೀರಾಮನ ಪಲ್ಲಕ್ಕಿ ಮತ್ತು ಕಳಸದೊಂದಿಗೆ ಭಕ್ತರ ಬೃಹತ್ ಮೆರವಣಿಗೆ ನಡೆಯಲಿದೆ. ಶ್ರೀಕೋದಂಡರಾಮ ದೇವಾಲಯದಲ್ಲಿ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ. ಮಾ.26 ರಂದು ಶ್ರೀಕೋದಂಡರಾಮ ದೇವಾಲಯದಲ್ಲಿ ಬೆಳಿಗ್ಗೆಯಿಂದ ದೈವ ನೃತ್ಯ, ಮಹಾಪೂಜೆ, ಪ್ರತಿಷ್ಠಾಪನಾ ವಾರ್ಷಿಕೋತ್ಸವ, ರಾಮನವಮಿ ಕಾರ್ಯಕ್ರಮಗಳು ಹಾಗೂ ಭಜನೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಮಾ.27 ರಂದು ಸಂಜೆ 6.30 ಗಂಟೆಗೆ ನಗರದ ಬನ್ನಿ ಮಂಟಪದ ಬಳಿಯಿಂದ ದೇವಾನುದೇವತೆಗಳ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾತಂಡಗಳ ಬೃಹತ್ ಶೋಭಾಯಾತ್ರೆ ಸಾಗಲಿದೆ. ಈ ಶೋಭಾಯಾತ್ರೆಗೆ ಮಕ್ಕಳ ಮಂಟಪಗಳ ಮೆರಗು ಜೊತೆಯಾಗಲಿದೆ. ಒಂದು ಟ್ರ್ಯಾಕ್ಟರ್ ಮಾತ್ರ ಬಳಸಬಹುದಾಗಿದ್ದು, 20 ಸ್ತಬ್ಧಚಿತ್ರಗಳಿಗೆ ಅವಕಾಶ ಕಲ್ಪಿಸಲಾಗುವುದು. ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಆಸಕ್ತಿ ಇರುವವರು 9880778047 ನ್ನು ಸಂಪರ್ಕಿಸಬಹುದಾಗಿದೆ.ನಗರದ ಗಾಂಧಿ ಮೈದಾನದಲ್ಲಿ ಸಂಜೆ 6 ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಲಿವೆ. ರಾಜ್ಯ ಮಟ್ಟದ ಹಾಗೂ ಕೊಡಗು ಜಿಲ್ಲೆಯ ಕಲಾತಂಡಗಳಿಂದ, ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ ವಿಜೃಂಭಿಸಲಿದೆ. ಎಲ್ಲಾ ಕಾರ್ಯಕ್ರಮಗಳು ಮಿನಿ ದಸರಾದಂತೆ ನಡೆಯಲಿದ್ದು, ಶಾಸಕರಾದಿಯಾಗಿ ಹಲವು ದಾನಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಶೋಭಾಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 5 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷ ಸರ್ವ ಭಕ್ತರ, ಎಲ್ಲಾ ಸಮುದಾಯದ ಜನರ, ಸಂಘ ಸಂಸ್ಥೆಗಳ ಪ್ರಮುಖರ, ಜನಪ್ರತಿನಿಧಿಗಳ, ಅಧಿಕಾರಿಗಳ, ಪೊಲೀಸ್ ಇಲಾಖೆಯ ಹಾಗೂ ದಾನಿಗಳ ಸಹಕಾರದಿಂದ ಶ್ರದ್ಧಾಭಕ್ತಿಯ ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಈ ಬಾರಿಯೂ ಸರ್ವರ ಸಹಕಾರವನ್ನು ಕೋರುತ್ತಿದ್ದೇವೆ ಎಂದರು.ಶ್ರೀಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ.ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರುಗಳಾಗಿ ಅಂಬೆಕಲ್ ನವೀನ್, ಸವಿತಾ ರಾಕೇಶ್, ಡಾ.ಎಸ್.ಎಂ.ಧನಂಜಯ್, ಗೌರವ ಅಧ್ಯಕ್ಷರಾಗಿ ಕೋಲೆಯಂಡ ನಿಶಾ ಮೋಹನ್, ಖಜಾಂಚಿಯಾಗಿ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಮುಖ್ಯ ಸಲಹೆಗಾರರಾಗಿ ಜಿ.ರಾಜೇಂದ್ರ, ಶ್ರೀಕೋದಂಡರಾಮ ಟ್ರಸ್ಟ್ನ ಅಧ್ಯಕ್ಷರಾಗಿ ಹೆಚ್.ಎನ್.ನಂಜುಂಡ ಹಾಗೂ ಜ್ಯೋತಿ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎನ್.ವಿಶ್ವ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೆ.ಎಂ.ಗಣೇಶ್ ಮಾಹಿತಿ ನೀಡಿದರು. ಖಜಾಂಚಿ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ ಮಾತನಾಡಿ ಕಳೆದ ವರ್ಷ 20 ಲಕ್ಷ ರು. ವೆಚ್ಚದಲ್ಲಿ ಅತ್ಯಂತ ವಿಜೃಂಭಣೆಯಿಂದ ರಾಮೋತ್ಸವ ಆಚರಿಸಲಾಗಿದೆ. ಈ ಬಾರಿಯ ರಾಮೋತ್ಸವಕ್ಕೆ 30 ಲಕ್ಷ ರು. ಖರ್ಚಾಗಲಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ದಾನಿಗಳು ವಂತಿಗೆಯನ್ನು ಚೆಕ್ ರೂಪದಲ್ಲಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಶೆಟ್ಟಿ ಮಾತನಾಡಿ ರಾಜಕೀಯ ರಹಿತವಾಗಿ ಎಲ್ಲರೂ ಒಗ್ಗಟ್ಟಿನಿಂದ ರಾಮೋತ್ಸವವನ್ನು ಆಚರಿಸುತ್ತಿದ್ದು, ಸರ್ವರೂ ಕೈಜೋಡಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷ ಅಂಬೆಕಲ್ ನವೀನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಶೆಟ್ಟಿ ಹಾಗೂ ಶ್ರೀಕೋದಂಡರಾಮ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಂಜುಂಡ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.