ಕನಕ ಕೀರ್ತನೆ ಮಾನವಕುಲಕ್ಕೆ ದಾರಿದೀಪ: ಜಯಲಕ್ಷ್ಮಿ

KannadaprabhaNewsNetwork |  
Published : Nov 28, 2026, 02:30 AM IST
 | Kannada Prabha

ಸಾರಾಂಶ

: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.

ಮಡಿಕೇರಿ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಾರ್ಶನಿಕ ಸಂತ, ಶ್ರೇಷ್ಠ ಕವಿ ಹಾಗೂ ಸಮಾಜ ಸುಧಾರಕ ಕನಕದಾಸರ ಜೀವನ, ಚಿಂತನೆ ಹಾಗೂ ಕೀರ್ತನೆಗಳು ಕೇವಲ ಒಂದು ಕಾಲಘಟ್ಟಕ್ಕೆ ಅಥವಾ ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿಲ್ಲ. ಅವು ಇಂದಿಗೂ, ಎಂದೆಂದಿಗೂ ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.

ಸೋಮವಾರಪೇಟೆ ತಾಲೂಕಿನ ಬೆಸೂರು ಪ್ರೌಢಶಾಲೆಯ ಶಿಕ್ಷಕ ಕೆ.ಎನ್.ಕಿರಣ್ ಕುಮಾರ್ ಮಾತನಾಡಿ, ಕನಕದಾಸರು ಬಾಲ್ಯದಿಂದಲೇ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಚಿಂತನೆ ಹೊಂದಿದ್ದರು. ಯಾವುದೇ ಬಾಹ್ಯ ಬಲವಿಲ್ಲದಿದ್ದರೂ ತಮ್ಮ ಜ್ಞಾನಶಕ್ತಿ, ಭಕ್ತಿ ಹಾಗೂ ಕೀರ್ತನೆಗಳ ಮೂಲಕ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಮಾತನಾಡಿ, ಮಾನವೀಯ ಮೌಲ್ಯಗಳು ವ್ಯಕ್ತಿಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದಾಗ ಬದುಕು ಕೇವಲ ಅಸ್ತಿತ್ವದ ಹೋರಾಟವಾಗಿ ಉಳಿಯುವುದಿಲ್ಲ. ಅದು ಅರ್ಥಪೂರ್ಣ, ನೆಮ್ಮದಿಯ ಹಾಗೂ ಸಮಾಜಮುಖಿ ಪಯಣವಾಗುತ್ತದೆ ಎಂದರು.

ಕುಶಾಲನಗರದ ಹಿರಿಯ ರಂಗಭೂಮಿ ಕಲಾವಿದ ಬರಮಣ್ಣ ಟಿ. ಬೆಟಗೇರಿ ಮಾತನಾಡಿ, ಕನಕದಾಸರು ತಮ್ಮ ಗೀತೆಗಳ ಮೂಲಕ ವೈಚಾರಿಕ ವಿಚಾರಗಳನ್ನು ವಿವರಿಸಿದ್ದಾರೆ. ಕೀರ್ತನೆಗಳ ಮೂಲಕ ನಿಜವಾದ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಕನಕದಾಸರ ಕೀರ್ತನೆಗಳನ್ನು ಉಲ್ಲೇಖಿಸಿ ವಿವರಿಸಿದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಇದ್ದರು.

ಉಪನ್ಯಾಸಕಿ ಜಯಲಕ್ಷ್ಮಿ ಹಾಗೂ ಸಮರ್ಥ ಕನ್ನಡಿಗರು ಸಂಘಟನೆಯ ಸಂಚಾಲಕಿ ಸೌಮ್ಯ ಅವರು ನಾಡಗೀತೆ ಮತ್ತು ವಂದೇ ಮಾತರಂ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೋಡಿ ಲಿಪಿ ದಾಖಲೆ ಭಾಷಾಂತರ, ಸಂರಕ್ಷಣೆಗೆ ಒಪ್ಪಂದ