ಮಡಿಕೇರಿ: ಸಮೀಪದ ಮಗ್ಗುಲ ಗ್ರಾಮದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು ವಿದ್ಯಾಸಂಸ್ಥೆಯ ಎಲ್ ಎಸ್ ಎ ಕೇರ್ಸ್ ವತಿಯಿಂದ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ. ಅದರ ಪ್ರಯುಕ್ತವಾಗಿ ಶನಿವಾರ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ರಾಮನಗರದಲ್ಲಿರುವ ಅಂಗನವಾಡಿಯ ಮಕ್ಕಳಿಗೆ ಕಲಿಕೆಗೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಸಮಾಜ ಸೇವಕಿಯಾದ ಪೂಜಾ ಸಜೇಶ್ ಅವರು, ಸಮಾಜದ ಏಳಿಗೆಯಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಮಕ್ಕಳ ಶಿಕ್ಷಣ ಹಾಗೂ ಬೆಳವಣಿಗೆಗೆ ನೆರವಾಗುವಂತಹ ಇಂತಹ ಸಮಾಜಮುಖಿ ಕಾರ್ಯಗಳನ್ನು ನಮ್ಮ ಶಾಲೆಯ ವತಿಯಿಂದ ನಡೆಸಿಕೊಂಡು ಬರುತ್ತಿದ್ದು ಇನ್ನು ಮುಂದೆಯೂ ನಿರಂತರವಾಗಿ ಮುಂದುವರಿಸಲಾಗುವುದು ಎಂದರು.
ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಸಹಕಾರವನ್ನು ನೀಡಿದಾಗ ಅವರಿಗೆ ಪ್ರೋತ್ಸಾಹವನ್ನು ನೀಡಿದಂತಾಗುತ್ತದೆ. ಆದರಿಂದ ಮಕ್ಕಳಿಗೆ ನಮ್ಮಿಂದ ಸಾಧ್ಯವಾದ ಸಹಾಯ ಮತ್ತು ಪ್ರೋತ್ಸಾಹವನ್ನು ಸದಾ ನೀಡಲಾಗುವುದು ಎಂದು ಹೇಳಿದರು. ರಾಮನಗರ ಅಂಗನವಾಡಿ ಕಾರ್ಯಕರ್ತೆ ರತಿ ಮಾತನಾಡಿ ಮೂಲತಃ ಹೆಗ್ಗಳ ಗ್ರಾಮದವರಾದ ಪೂಜಾ ಸಜೇಶ್ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿಯೂ ಸಹ ವಿವಿಧ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ . ಎಲ್ ಎಸ್ ಎ ಕೇರ್ಸ್ ವತಿಯಿಂದ ಇಂದು ನಮ್ಮ ಅಂಗನವಾಡಿಯಲ್ಲಿ ಕಲಿಕಾ ಸಾಮಗ್ರಿ ವಿತರಣೆ ಹಾಗೂ ಶೈಕ್ಷಣಿಕ ಮನೋರಂಜನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಮ್ಮ ವಿದ್ಯಾರ್ಥಿಗಳಿಗೂ ಹಾಗೂ ನಮಗೂ ಸಂತಸವನ್ನುಂಟು ಮಾಡಿದೆ ಎಂದರು. ಸಂಸ್ಥೆಯು ಮತ್ತಷ್ಟು ಸಮಾಜಮುಖಿ ಚಟುವಟಿಕೆಗಳನ್ನು ಮಾಡಲು ದೇವರು ಹರಸಲಿ ಎಂದು ಆಶಿಸಿದರು.ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಅಂಗನವಾಡಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಅಕಾಡೆಮಿಯ ಶಿಕ್ಷಕರಾದ ಸ್ವಾತಿ ,ಶಾಲಿನಿ, ಪೋಷಕರು ಹಾಗೂ ಎರಡು ಸಂಸ್ಥೆಯ ಮಕ್ಕಳು ಇದ್ದರು.