ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಅವರನ್ನು ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.ನಗರದ ಸಾಲು ಮರದ ತಿಮ್ಮಕ್ಕ ಪಾರ್ಕ್ ಸಮೀಪದ ಖಾಸಗಿ ಕೆಫೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಎಂ.ಎ.ರುಬೀನಾ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಮೂಕೊಂಡ ನಿತಿನ್ ಕುಶಾಲಪ್ಪ ಅವರು, ಮಕ್ಕಳಿಗಾಗಿ ದಕ್ಷಿಣ ಜನಪದ ಕತೆಗಳ ಕುರಿತು ಬರೆದ ಪಫಿನ್ ಬುಕ್ಸ್ ಪ್ರಕಟಿತ “ದಕ್ಷಿಣ: ಸೌತ್ ಇಂಡಿಯನ್ ಮಿಥ್ಸ್ ಅಂಡ್ ಫೇಬಲ್ಸ್ ರಿಟೋಲ್ಡ್” ಇಂಗ್ಲಿಷ್ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ ಎಂದರು. ಕರ್ನಾಟಕದಿಂದ 3 ಹೆಸರು ಬಂದಿದ್ದು, ಕನ್ನಡ ಸಾಹಿತ್ಯದಲ್ಲಿ ಇಬ್ಬರು ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ತನಗೆ ಲಭಿಸಿರುವುದಾಗಿ ತಿಳಿಸಿದರು. ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ತನ್ನ ಸಾಹಿತ್ಯಾಸಕ್ತಿಯನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡಗು ಮೂಲದ ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಅವರು ಭಾರತದ ಅತೀ ದೊಡ್ಡ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಗೆ ಹಾಗೂ ಕನ್ನಡ ನಾಡಿಗೆ ಹೆಮ್ಮೆಯ ವಿಷಯ ಎಂದರು.ನಿತಿನ್ ಕುಶಾಲಪ್ಪ ಪ್ರತಿಭಾವಂತ ಯುವ ಸಾಹಿತಿಯಾಗಿದ್ದು, ಸರಳತೆಯನ್ನು ಮೈಗೂಡಿಸಿಕೊಂಡವರಾಗಿದ್ದಾರೆ. ಇವರು ಸಾಫ್ಟ್ವೇರ್ ಅಭಿವೃದ್ಧಿ ಉದ್ಯಮದ ಜೊತೆಗೆ ಸಾಹಿತ್ಯದಲ್ಲೂ ತೊಡಗಿಕೊಳ್ಳುವ ಮೂಲಕ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ. ಸಾಧನೆಗೆ ಪೋಷಕರ ಪ್ರೋತ್ಸಾಹ ಅಗತ್ಯ. ಅದರಂತೆ ಪೋಷಕರು ಸಾಹಿತ್ಯಾಸಕ್ತಿಗೆ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಂಶೋಧನೆ ಕೃತಿಗಳು ಹೊರಬರುವಂತಾಗಲಿ ಎಂದು ಹಾರೈಸಿದರು.ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಪರಿಷತ್ತು ಹಲವು ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ ಎಂದರು. ಮೂಕೊಂಡ ನಿತಿನ್ ಕುಶಾಲಪ್ಪ ಅವರ ತಾಯಿ ಪುಷ್ಪ ದಮಯಂತಿ ಮಾತನಾಡಿ, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವುದರಿಂದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕಾಣುತ್ತದೆ. ಬಾಲ್ಯದಿಂದಲೂ ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಪುತ್ರ ಉದ್ಯೋಗದ ಜೊತೆಗೆ ಬರವಣಿಗೆಯನ್ನು ಮೈಗೂಡಿಸಿಕೊಂಡಿದ್ದಾರೆ. ಯುವಜನತೆ ತಮ್ಮ ಉದ್ಯೋಗದ ಜೊತೆಗೆ ಆಸಕ್ತಿ ಕ್ಷೇತ್ರಕ್ಕೂ ಆದ್ಯತೆ ನೀಡುವಂತಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮೂಕೊಂಡ ನಿತಿನ್ ಕುಶಾಲಪ್ಪ ಅವರ ತಂದೆ ಮೂಕೊಂಡ ಪೂಣಚ್ಚ, ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಪೇರಿಯಂಡ ಯಶೋಧ, ಪ್ರಧಾನ ಕಾರ್ಯದರ್ಶಿ ನಿವ್ಯ ದೇವಯ್ಯ, ನಿರ್ದೇಶಕರಾದ ಲೋಹಿತ್ ಮಾಗುಲುಮನೆ, ಹರ್ಷಿತಾ ಶೆಟ್ಟಿ ಮನವಳಿಕೆಗುತ್ತು, ರಂಜಿತ್ ಜಯರಾಂ, ಲೋಕೇಶ್ ಕಾಟಕೇರಿ, ಎಸ್.ಆರ್.ವತ್ಸಲ, ಹೇಮಾ ಅಜಿತ್, ಅರುಣ್ ಕುಮಾರ್, ರಿಶಾ, ಇಷಾ, ಶಿವ ಕರ್ಣಂಗೇರಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.