ಕನ್ನಡಪ್ರಭವಾರ್ತೆ ಮಡಿಕೇರಿ
ನಗರಸಭೆ ಮುಂಭಾಗ ಜಮಾಯಿಸಿದ ಪ್ರತಿಭಟನಾ ನಿರತರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಹಿಲ್ ರಸ್ತೆ, ತೆನಲ್ ಆಶ್ರಮ ದಾರಿ, ತ್ಯಾಗರಾಜ ಕಾಲನಿ, ಉಕ್ಕುಡರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಕಾವೇರಿ ಕಲಾಕ್ಷೇತ್ರ ಅಭಿವೃದ್ಧಿಗೆ ಮುಂದಾಗಬೇಕೆಂದು ಆಗ್ರಹಿಸಿದರು.ರಸ್ತೆ ಗುಂಡಿಗಳ ಸ್ವಾಗತ
ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಯಿಸಿನ್, ಮಡಿಕೇರಿಯ ಸೊಬಗನ್ನು ಆನಂದಿಸಲು ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಂದು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಕೊಳಕುಮಯ, ಗುಂಡಿಮಯ ರಸ್ತೆಗಳು ಅವರನ್ನು ಸ್ವಾಗತಿಸುತ್ತವೆ. ನಗರಸಭೆ ಆಡಳಿತ ಸ್ವಚ್ಛತೆ, ಅಭಿವೃದ್ಧಿಗೆ ಸಕರಾತ್ಮಕವಾಗಿ ಸ್ಪಂದಿಸುವಲ್ಲಿ ವಿಫಲವಾಗಿದೆ. ನಗರದ ನೀರಿನ ಸಮಸ್ಯೆ ಪರಿಹರಿಸಲು ಅಮೃತ್ ೨.೦ ಯೋಜನೆ ಆರಂಭ ಮಾಡಲಾಗಿದೆ. ಅದಕ್ಕಾಗಿ ಅಗೆದ ರಸ್ತೆಗಳನ್ನು ಹಾಗೆ ಬಿಡಲಾಗಿದೆ. ಡಾಂಬರು, ಕಾಂಕ್ರೀಟ್ ಕಾಮಗಾರಿ ಮಾಡಲಿಲ್ಲ ಎಂದು ದೂರಿದರು.ನಗರದಲ್ಲಿ ಕೆಲವು ರಸ್ತೆಗಳು ಡಾಂಬರಿಕರಣಗೊಂಡಿದ್ದು, ಕೆಲವೇ ತಿಂಗಳುಗಳಲ್ಲಿ ಕಿತ್ತು ಬಂದಿದೆ. ಆದರೆ, ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಜತಗೆ ಇನ್ನು ಕೆಲವೇ ಕೆಲವು ತಿಂಗಳಲ್ಲಿ ಆಡಳಿತ ಅವಧಿ ಮುಗಿಯಲಿದೆ. ಅಷ್ಟರೊಳಗೆ ಮರುಡಾಂಬರಿಕರಣವಾಗದಿದ್ದಲ್ಲಿ ಗುತ್ತಿಗೆ ನಿರ್ವಾಹಣ ಅವಧಿ ಮುಗಿದುಹೋಗಲಿದೆ. ಯಾರು ಇದರ ಹೊಣೆಯನ್ನು ಹೊರಲಿದ್ದಾರೆ ಎಂದು ಪ್ರಶ್ನಿಸಿದರು.ಸ್ಥಾಯಿ ಸಮಿತಿ ಸಭೆ ನಡೆದಿಲ್ಲನಗರ ಉತ್ಥಾನ ಅನುದಾನದಲ್ಲಿ ಶೇ.೩೦ರಷ್ಟು ಮಾತ್ರ ಕಾಮಗಾರಿಗಳು ನಡೆದಿದೆ. ಬಾಕಿ ಕೆಲಸಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಈ ವಿಚಾರವನ್ನು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಟೆಂಡರ್‌ದಾರರನ್ನು ಕರೆದು ಸೂಚನೆ ನೀಡುವಂತೆ ತಿಳಿಸಲಾಗಿತ್ತು. ಈ ಸಂಬಂಧ ನಗರಸಭೆ ಅಧ್ಯಕ್ಷರು ಯಾವುದೇ ಸಭೆಗಳನ್ನು ಕರೆದಿಲ್ಲ. ಸ್ಥಾಯಿ ಸಮಿತಿ ಸಭೆ ಕರೆದಿಲ್ಲ ಎಂದು ದೂರಿದ ಅವರು, ೮ ತಿಂಗಳ ಆಡಳಿತ ಅವಧಿಯಲ್ಲಿ ೪ ಸಾಮಾನ್ಯ ಸಭೆಯನ್ನು ಮಾತ್ರ ಕರೆಯಲಾಗಿದೆ. ೧೫ ದಿನಕ್ಕೊಮ್ಮೆ ಸ್ಥಾಯಿ ಸಮಿತಿ ಕರೆಯಬೇಕು. ಆದರೆ, ಇದುವರೆಗೆ ಸಭೆ ಕರೆದಿಲ್ಲ ಎಂದು ಆರೋಪಿಸಿದರು.ಕಾವೇರಿ ಕಲಾಕ್ಷೇತ್ರಕ್ಕೆ ೯ ಕೋಟಿ ಕ್ರಿಯಾಯೋಜನೆ ಮಾಡಿ ೨ ಅಂತಸ್ತಿನ ಪಾರ್ಕಿಂಗ್ ವ್ಯವಸ್ಥೆ ಮಾಡಲು ನೀಲಿನಕ್ಷೆ ತಯಾರಿಸಲಾಗಿದೆ. ಆದರೆ, ಕಳೆದ ೪ ವರ್ಷದಿಂದ ಕಾಮಗಾರಿ ಆರಂಭಿಸಲು ನಗರಸಭೆ ಆಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದೆ. ಅದನ್ನು ತೆರವು ಮಾಡುವ ಶಕ್ತಿ ನಗರಸಭೆ ಆಡಳಿತ ಮಂಡಳಿಗಿಲ್ಲ. ಆದರೆ, ಗೂಡಂಗಡಿಗಳನ್ನು ತೆರವು ಮಾಡಿ ಸಹಾಸ ಮೆರೆಯುತ್ತಿದ್ದಿರಾ. ಇದಕ್ಕೆ ನಗರದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.ಈ ಸಂದರ್ಭ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಉಪಾಧ್ಯಕ್ಷ ಮನ್ಸೂರ್ ಅಲಿ, ಮಾಜಿ ಅಧ್ಯಕ್ಷ ಅಬ್ದುಲ್ ಅಡ್ಕಾರ್, ಸದಸ್ಯರಾದ ಮೇರಿ ವೇಗಸ್, ನಗರಸಭೆೆ ಎಸ್‌ಡಿಪಿಐ ಸದಸ್ಯರಾದ ಬಶೀರ್, ನೇಮ ಹರ್ಷದ್ ಇತರರಿದ್ದರು.