ಕನ್ನಡಪ್ರಭ ವಾರ್ತೆ ಮಡಿಕೇರಿ
ತಾಲೂಕು ದಸರಾ ಕ್ರೀಡಾಕೂಟಕ್ಕೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಚಾಲನೆ ದೊರೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ ಚಾಲನೆ ನೀಡಿದರು.ಅಥ್ಲೆಟಿಕ್ಸ್ ಸಂಬಂಧಿಸಿದಂತೆ 100, 200, 400, 800 ಹಾಗೂ 1500 ಹಾಗೂ 5 ಸಾವಿರ, 10 ಸಾವಿರ ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, ರಿಲೇ, ಹಾಗೆಯೇ ವಾಲಿಬಾಲ್, ಕೋಕೋ, ಥ್ರೋಬಾಲ್, ಪುಟ್ಬಾಲ್ ಆಟಗಳು ನಡೆದವು.
ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಹಾಕಿ ಆಯ್ಕೆ ಪ್ರಕ್ರಿಯೆ ಕುಶಾಲನಗರ ಕೂಡಿಗೆಯ ಹಾಕಿ ಟರ್ಫ್ ಮೈದಾನದಲ್ಲಿ ಶನಿವಾರ ನಡೆಯಲಿದೆ ಎಂದು ವಿಸ್ಮಯಿ ಮಾಹಿತಿ ನೀಡಿದರು.ಸರ್ಕಾರ ದಸರಾ ಕ್ರೀಡಾಕೂಟಕ್ಕೆ ಅವಕಾಶ ಮಾಡಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಗಳು ನಡೆಯಲಿದ್ದು, ಈ ಅವಕಾಶವನ್ನು ಕ್ರೀಡಾಪಟುಗಳು ಬಳಸಿಕೊಳ್ಳುವಂತೆ ಸಲಹೆ ಮಾಡಿದರು.ಕುಶಾಲನಗರ ತಾಲೂಕಿನವರಿಗೆ ಶನಿವಾರ ಕೂಡಿಗೆ ಕ್ರೀಡಾ ಶಾಲೆ ಮೈದಾನ (ಮಡಿಕೇರಿ ಮತ್ತು ಕುಶಾಲನಗರ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಕ್ರೀಡಾಶಾಲೆ ಮೈದಾನದಲ್ಲಿ ನಡೆಯಲಿದೆ).
ಸೋಮವಾರಪೇಟೆ ತಾಲೂಕಿನವರಿಗೆ ಭಾನುವಾರ ಕೂಡಿಗೆ ಕ್ರೀಡಾ ಶಾಲೆ ಮೈದಾನ (ಸೋಮವಾರಪೇಟೆಯ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆ ಕ್ರೀಡಾ ಶಾಲೆ ಮೈದಾನ, ಕೂಡಿಗೆಯಲ್ಲಿ ನಡೆಯಲಿದೆ) ಕ್ರೀಡಾಕೂಟ ನಡೆಯಲಿದೆ.ಪೊನ್ನಂಪೇಟೆ ತಾಲೂಕಿನವರಿಗೆ 23ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ (ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ). ವಿರಾಜಪೇಟೆ ತಾಲೂಕಿನವರಿಗೆ 24 ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ (ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ).