ಮಡಿಕೇರಿ ತಾಲೂಕು ಸವಿತಾ ಸಮಾಜದಿಂದ ರಕ್ತದಾನ ಶಿಬಿರ, ಕ್ರೀಡಾಕೂಟ

KannadaprabhaNewsNetwork |  
Published : Feb 05, 2025, 12:33 AM IST
ಚಿತ್ರ  : 4ಎಂಡಿಕೆ3 : ಸವಿತಾ ಸಮಾಜದ ವತಿಯಿಂದ ಆಯೋಜಿತ ಕ್ರೀಡಾಕೂಟ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಸಂದರ್ಭ.  | Kannada Prabha

ಸಾರಾಂಶ

ಸಮಾಜದಲ್ಲಿ ಬಹಳ ಸಣ್ಣ ಪ್ರಮಾಣದ ಸಂಖ್ಯೆಯಲ್ಲಿದ್ದರೂ ಸವಿತಾ ಸಮಾಜದವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ ಎಂದು ಬಿ. ವೈ. ರಾಜೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದಲ್ಲಿ ಬಹಳ ಸಣ್ಣ ಪ್ರಮಾಣದ ಸಂಖ್ಯೆಯಲ್ಲಿದ್ದರೂ ಸವಿತಾ ಸಮಾಜದವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ನಗರಸಭಾ ಸದಸ್ಯ ಬಿ. ವೈ. ರಾಜೇಶ್ ಶ್ಲಾಘಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸವಿತಾ ಮಹರ್ಷಿ ಜಯಂತಿ ಹಿನ್ನಲೆಯಲ್ಲಿ ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ಆಯೋಜಿತ ಕ್ರೀಡಾಕೂಟ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರಾಜೇಶ್, ಸವಿತಾ ಸಮಾದವರು ಇತ್ತೀಚಿನ ವರ್ಷಗಳಲ್ಲಿ ಇತರ ಸಮಾಜಗಳಂತೆ ಸಂಘಟಿತರಾಗುವ ಮೂಲಕ ತಮ್ಮ ಸಮಾಜಕ್ಕೆ ಅಗತ್ಯತೆಗಳನ್ನು ಪಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸವಿತಾ ಸಮಾಜದ ಕೆಲವು ಬೇಡಿಕೆಗಳ ಬಗ್ಗೆ ಶಾಸಕರ ಗಮನ ಸೆಳೆದು ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಸವಿತಾ ಮಹರ್ಷಿಗಳೇ ಮೂಲಪುರುಷರಾಗಿರುವ ಈ ಸಮಾಜದವರು ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತಾರೆ. ಸವಿತಾ ಸಮಾಜದವರ ಅತ್ಯಗತ್ಯತೆ ಕೋವಿಡ್ ಲಾಕ್ ಡೌನ್ ಸಂದರ್ಭ ಜನರಿಗೆ ಮತ್ತಷ್ಟು ಹೆಚ್ಚಾಗಿ ಮನವರಿಕೆಯಾಯಿತು ಎಂದರಲ್ಲದೇ, ಹಿಂದಿನ ಕಾಲದಲ್ಲಿ ದೇವರಿಗೆ ಕ್ಷೌರಮಾಡುವಲ್ಲಿಯೂ ಖ್ಯಾತರಾಗಿದ್ದ ಸವಿತಾ ಸಮಾಜದವರು ದೇವರ ಜತೆಗೇ ಧ್ಯಾನ ಕೂಡ ಮಾಡುವ ಪುಣ್ಯ ಪಡೆದಿದ್ದರೆಂದು ಉಲ್ಲೇಖವಿದ ಎಂದು ಹೆಮ್ಮೆಯಿಂದ ನುಡಿದರು. ರಕ್ತದಾನ ಮಾಡುವ ಮೂಲಕ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಹೆಚ್ಚಿನ ರಕ್ತ ಪೂರೈಸುವ ಕೆಲಸ ಆಗಬೇಕು. ಜಿಲ್ಲಾ ರಕ್ತನಿಧಿಗೆ ಮಾಸಿಕ 500 ಯೂನಿಟ್ ರಕ್ತದ ಅಗತ್ಯತೆಯಿದ್ದು ಆ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೇ ಹೋದಾಗ ಅನೇಕ ರೋಗಿಗಳ ಜೀವನಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ. ವಿವಿಧ ಸಂಘಸಂಸ್ಥೆಗಳು ಕೂಡ ಸವಿತಾ ಸಮಾಜದವರಂತೆ ರಕ್ತಸಂಗ್ರಹಣಾ ಶಿಬಿರಗಳನ್ನು ಆಯೋಜಿಸುವಂತಾಗಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ತಾಲೂಕು ಸವಿತಾ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಮಧುಚೆಟ್ಟಿಮಾನಿ ಮಾತನಾಡಿ, ಸವಿತಾ ಸಮಾಜಕ್ಕೆ ಕೊಡಗು ಜಿಲ್ಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಅಗತ್ಯವಾಗಿ ಬೇಕಾಗಿದೆ ಎಂದರಲ್ಲದೇ, ಯಾವುದೇ ಜನಾಂಗಗಳು ತಮ್ಮ ಸಮಾಜದ ಏಳಿಗೆಗಾಗಿ ಪೈಪೋಟಿ ನಡೆಸುವಂಥ ಬೆಳವಣಿಗೆ ಇರಬಾರದು ಎಂದು ಅಭಿಪ್ರಾಯಪಟ್ಟರು.

ಕೂರ್ಗ್‌ ಬ್ಲಡ್ ಫೌಂಡೇಷನ್ ಅಧ್ಯಕ್ಷ ವಿನು, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್. ದೋರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು, ತಾಲೂಕು ಸವಿತಾ ಸಮಾಜದ ಮಹಿಳಾಧ್ಯಕ್ಷೆ ಆರ್.ಬಿ.ವಸಂತಿ, ಗೌರವಾಧ್ಯಕ್ಷೆ ಸುಂದರಮ್ಮ, ಸಮಾಜದ ಗೌರವಾಧ್ಯಕ್ಷ ಈರಪ್ಪ, ನಗರಾಧ್ಯಕ್ಷ ಸಂದೇಶ್, ರಕ್ತನಿಧಿ ಕೇಂದ್ರದ ಡಾ. ತೇಜಸ್ವಿನಿ ವೇದಿಕೆಯಲ್ಲಿದ್ದರು.

ಕ್ರೀಡಾಕೂಟದ ಅಂಗವಾಗಿ ನಡೆದ ಪ್ರದರ್ಶನ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸವಿತಾ ಸಮಾಜ ಮತ್ತು ದ್ವಿತೀಯ ಸ್ಥಾನ ಪಡೆದ ಕೊಡಗು ಪ್ರೆಸ್ ಕ್ಲಬ್ ತಂಡಕ್ಕೆ ಬಹುಮಾನ ವಿತರಿಸಲಾಯಿತು. ರಕ್ತದಾನ ಶಿಬಿರಕ್ಕೆ ಮೂಡಾ ಅಧ್ಯಕ್ಷ ರಾಜೇಶ್ ಬಿ.ವೈ. ಸ್ವತ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ವೈವಿಧ್ಯಮಯ ಕ್ರೀಡೆಗಳು, ಸವಿತಾ ಸಮಾಜದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ