ಮಾಗಡಿ: ಐತಿಹಾಸಿಕ ಹಿನ್ನೆಲೆಯುಳ್ಳ ಮಾಗಡಿ ಶ್ರೀ ರಂಗನಾಥ ಸ್ವಾಮಿ ಬೃಹತ್ ದನಗಳ ಜಾತ್ರೆ ಯುಗಾದಿ ಹಬ್ಬದ ಸಡಗರದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿದೆ.
ಈ ಬಾರಿಯ ಜಾತ್ರೆಯ ಪ್ರಮುಖ ಆಕರ್ಷಣೆ ಹಳ್ಳಿಕಾರ್ ತಳಿಯ ಎತ್ತುಗಳು. ಜಾತ್ರೆಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದಲೂ ರೈತರು ವಿವಿಧ ತಳಿಗಳ ದನಗಳನ್ನು ಕೊಂಡುಕೊಳ್ಳಲು ಆಗಮಿಸಿದ್ದಾರೆ.
ಜಾತ್ರೆಯಲ್ಲಿ ಭಾಗವಹಿಸಿರುವ ರೈತರೊಬ್ಬರ ಪ್ರಕಾರ ಕೆಲವು ಎತ್ತುಗಳ ಬೆಲೆ ಲಕ್ಷಾಂತರ ರೂಪಾಯಿಗಳವರೆಗೂ ಇದೆ. ಹಳ್ಳಿಕಾರ್ ಎತ್ತುಗಳ ಶಕ್ತಿ ಮತ್ತು ಅಂದಕ್ಕೆ ಮನಸೋತ ರೈತರು ದೊಡ್ಡ ಮೊತ್ತ ನೀಡಿ ಇವುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. 6 ಲಕ್ಷದಿಂದ 12 ಲಕ್ಷದವರೆಗೂ ಒಂದು ಜೊತೆ ಎತ್ತಿಗೆ ಬೆಲೆ ನಿಗದಿಪಡಿಸಲಾಗಿದೆ.ಜಾತ್ರೆಗೆ ಬರುವ ದನಗಳಿಗೆ ನೀರಿನ ವ್ಯವಸ್ಥೆ, ಆಹಾರ ಮತ್ತು ನೆರಳಿನ ಸೌಕರ್ಯಗಳನ್ನು ದಾನಿಗಳು, ಸ್ಥಳೀಯ ಸಮಾಜ ಸಮಿತಿ ಮತ್ತು ಶಾಸಕರ ಎಚ್.ಸಿ.ಬಾಲಕೃಷ್ಣರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಟ್ಯಾಂಕರ್‌ಗಳ ಮೂಲಕ ನಿರಂತರವಾಗಿ ನೀರನ್ನು ಪೂರೈಸಲಾಗುತ್ತಿದೆ ಊಟದ ವ್ಯವಸ್ಥೆ ಶಾಸಕರು ಮತ್ತು ದಾನಿಗಳ ಸಹಕಾರದೊಂದಿಗೆ ಪ್ರತಿದಿನ ಸುಮಾರು 2,000- 3,000 ಜನರಿಗೆ ಉಚಿತ ಊಟ ವ್ಯವಸ್ಥೆ ಮಾಡಲಾಗಿದೆ. ರೈತರು ತಮ್ಮ ಎತ್ತುಗಳ ಜೊತೆ ಮೈದಾನದಲ್ಲೇ ತಂಗಲು ಬೇಕಾದ ಪೂರಕ ವ್ಯವಸ್ಥೆ ಮಾಡಲಾಗಿದೆ.
ಬರೀ ವ್ಯಾಪಾರವಷ್ಟೇ ಅಲ್ಲದೆ, ಇಲ್ಲಿ ಎತ್ತುಗಳ ನಡುವೆ ಸ್ಪರ್ಧೆಯೂ ನಡೆಯುತ್ತದೆ. ಪಶುಸಂಗೋಪನಾ ಇಲಾಖೆಯವರು ಎತ್ತುಗಳ ಹಲ್ಲುಗಳನ್ನು ನೋಡಿ ಅವುಗಳ ವಯಸ್ಸನ್ನು ನಿರ್ಧರಿಸುತ್ತಾರೆ (2 ಹಲ್ಲು, 4 ಹಲ್ಲು, 6 ಹಲ್ಲು ) ಅವುಗಳ ಮೈಕಟ್ಟು ಮತ್ತು ಕತ್ತು ಎತ್ತಿ ನಡೆಯುವ ಗತ್ತು ಹೇಗಿದೆ? ಸುಳಿಗಳು ಸರಿಯಾಗಿವೆಯೇ? ಎಂಬುದನ್ನು ನೋಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಬಹುಮಾನ: ಈ ಬಾರಿ ದಾನಿಗಳಾದ ಮಹೇಶ್ ವಿಜೇತರಿಗೆ ಚಿನ್ನದ ಪದಕ ನೀಡುತ್ತಿರುವುದು ವಿಶೇಷ. ಉಳಿದಂತೆ ವಿವಿಧ ವಿಭಾಗಗಳಲ್ಲಿ 7,500 ರು. ನಗದು ಬಹುಮಾನ ಶಾಸಕ ಎಚ್.ಸಿ.ಬಾಲಕೃಷ್ಣ ವಿತರಣೆ ಮಾಡಲಿದ್ದಾರೆ.