ಕಾರವಾರ: ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಶನಿವಾರ ಮಾಘಚೌತಿ ಸಂಭ್ರಮ ಮನೆ ಮಾಡಿತ್ತು. ಏಕದಂತನ ಮೂರ್ತಿಯನ್ನು ತಂದು ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಯಿತು.
ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಮಹಾರಾಷ್ಟ್ರ, ಗೋವಾ ಭಾಗದಲ್ಲಿ ಆಚರಣೆಯಲ್ಲಿದೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಕಾರವಾರದಲ್ಲಿ ಇರುವ ಹಿನ್ನಲೆ ಮಾಘ ಚೌತಿಯನ್ನು ಕಾರವಾರದಲ್ಲಿ ಸಹ ಆಚರಣೆ ಮಾಡುತ್ತಾ ಬಂದಿದ್ದು, ಅಂಕೋಲಾ, ಕುಮಟಾ ಭಾಗದಲ್ಲೂ ಮಾಘ ಚೌತಿಯನ್ನು ಆಚರಣೆ ಮಾಡುವ ಪದ್ಧತಿಯಿದೆ. ಗಣೇಶ ಚತುರ್ಥಿಯಂತೆ ಮೋದಕ, ಪಂಚಕಜ್ಜಾಯ ಒಳಗೊಂಡು ಲಂಬೋದರನಿಗೆ ಪ್ರಿಯವಾದ ಖಾದ್ಯಗಳನ್ನು ಮಾಡಿ ಪೂಜೆಸಿ ಅಂದೇ ವಿಸರ್ಜನೆ ಮಾಡಲಾಯಿತು. ಚಿಕ್ಕ ಮಕ್ಕಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಣಪತಿ ಉಳ್ವೇಕರ ಒಳಗೊಂಡು ಹಲವಾರು ಮನೆಗಳಲ್ಲಿ ಕೂಡಾ ಮಾಘ ಚೌತಿ ಹಿನ್ನೆಲೆಯಲ್ಲಿ ವಿನಾಯಕನ ಪೂಜಾ ಕೈಂಕರ್ಯ ನಡೆದಿದ್ದು, ಕುಟುಂಬಸ್ಥರು, ಬಂಧುಬಳಗದವರು ಪಾಲ್ಗೊಂಡಿದ್ದರು. ಭಾದ್ರಪದ ಚೌತಿಯಲ್ಲಿ ಒಂದು ದಿನ, ಐದು, ಏಳು ಹೀಗೆ ಹಲವು ದಿನಗಳ ಕಾಲ ಗಣಪನ ಆರಾಧನೆ ಇರುತ್ತದೆ. ಆದರೆ ಮಾಘ ಚೌತಿಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಯನ್ನು ಒಂದೇ ದಿನ ಇರಿಸಿ, ಪೂಜಿಸಿ ರಾತ್ರಿ ವೇಳೆಗೆ ವಿಸರ್ಜನೆ ಮಾಡಲಾಗುತ್ತದೆ.ಸಾರ್ವಜನಿಕ ಗಣೇಶೋತ್ಸವ: ಕಾರವಾರ ತಾಲೂಕಿನ ಮಾಜಾಳಿಯ ಗಾಂವಗೇರಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ನಡೆಯಿತು. ಸ್ಥಳೀಯರೊಂದೆ ಅಲ್ಲದೇ ಗೋವಾ, ಮಹಾರಾಷ್ಟ್ರದಿಂದ ಕೂಡಾ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಇದೇ ಮೊದಲ ಬಾರಿಗೆ ನಗರದ ಮೀನು ಮಾರುಕಟ್ಟೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಮೀನು ಮಾರುಕಟ್ಟೆಯಲ್ಲೇ ಮಂಟಪವನ್ನು ಸ್ಥಾಪಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಪೂಜಿಸಲಾಯಿತು. ಮಾಘ ಚೌತಿ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆಯೂ ನಡೆಯಿತು. ವಾರದ ಹಿಂದೆಯೇ ಮೀನು ಮಾರುಕಟ್ಟೆಯನ್ನು ಕಡಲತೀರದ ಸಮೀಪ ಸ್ಥಳಾಂತರ ಮಾಡಲಾಗಿದ್ದು, ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಆವರಣದಲ್ಲಿ ಭವ್ಯವಾದ ಮಂಟಪ ಸ್ಥಾಪಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ಗೋಕರ್ಣದಲ್ಲಿ ಶ್ರದ್ದಾ ಭಕ್ತಿಯಿಂದ ಗಣೇಶ ಜಯಂತಿ ಆಚರಣೆ:ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಗಣೇಶ ಜಯಂತಿಯನ್ನು (ದುಂಡಿರಾಜ ಚತುರ್ಥಿ) ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿನ ಮಹಾಗಣಪತಿ ಮಂದಿರದಲ್ಲಿ ಮುಂಜಾನೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ, ಪೂಜೆ ನೆರವೇರಿಸಿದರು. ಮಂದಿರದಲ್ಲಿ ಸಹ ವಿಶೇಷ ಪೂಜೆ, ಮಧ್ಯಾಹ್ನ "ಕೊಟ್ಟೆಕಣಜ " ವಿಶೇಷ ಸೇವೆ ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮಗಳು ಜರಗಿತು. ಇದರಂತೆ ಈ ಭಾಗದ ವಿವಿಧ ಕಡೆಯಿರುವ ಗಣೇಶನ ಮಂದಿರದಲ್ಲಿ ವಿಶೇಷ ಪೂಜೆಗಳು ನಡೆದವು. ಇನ್ನೂ ಪ್ರತಿ ಮನೆಯಲ್ಲೂ ವಿಶೇಷ ಪೂಜೆ, ಭಕ್ಷ್ಯಗಳ ನೈವೇದ್ಯಗೈದು ಪ್ರಥಮ ಪೂಜಿತ ವಿನಾಯಕನನ್ನು ಆರಾಧಿಸಿದರು.