ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶನಿವಾರ ಮಧ್ಯರಾತ್ರಿಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ನೇತೃತ್ವದ ವೈದಿಕರ ತಂಡ ದೇವಿಗೆ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ ಸೇವೆ, ಗಣಹೋಮ, ನಕ್ಷತ್ರ ಹೋಮ, ದುರ್ಗಾ ಹೋಮ ಹಾಗೂ ಸತ್ಯನಾರಾಯಣ ಪೂಜೆ ಸೇರಿದಂತೆ ಇತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಮಾಘ ಮಾಸದ ಹುಣ್ಣಿಮೆಯಲ್ಲಿ ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ಶಕ್ತಿ ದೇವತೆ ಶ್ರೀನಿಮಿಷಾಂಬ ದೇವಿ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಸಹಸ್ರಾರು ಭಕ್ತರು ಮಾಘ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ತಮ್ಮ ಕಷ್ಟ ಕಾಪ್ಣ್ಯಗಳನ್ನು ನೀಗಿಸುವಂತೆ ಪ್ರಾರ್ಥನೆ ಸಲ್ಲಿಸಿದರು.ದೇವಾಲಯದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ಭಕ್ತಿ ಗೀತೆ, ಸಂಗೀತ ಹಾಗೂ ರಸಸಂಜೆ ಕಾರ್ಯಕ್ರಮಗಳು ಇಡೀ ರಾತ್ರಿ ಆಗಮಿಸಿದ ಭಕ್ತರಿಗೆ ರಸದೌತಣ ನೀಡಿತು. ಬಂದ ಭಕ್ತರಿಗೆ ಮಧ್ಯ ರಾತ್ರಿಯಿಂದ ಭಾನುವಾರ ಸಂಜೆವರೆಗೂ ಪ್ರಸಾದ ರೂಪದಲ್ಲಿ ತಿಂಡಿ ಸೇರಿದಂತೆ ಅನ್ನಸಂತರ್ಪಣೆ ಬೆಂಗಳೂರಿನ ದಾನಿಯೊಬ್ಬರು ನೆರವೇರಿಸಿದರು.
ಶ್ರೀನಿಮಿಷಾಂಬ ದೇವಾಲಯದ ಇಒ ಮಹೇಶ್ ಸೇರಿದಂತೆ ತಾಲೂಕು ಆಡಳಿತದ ಸಿಬ್ಬಂದಿ ವರ್ಗ ಇತರರು ಇದ್ದರು.