ಮ್ಯಾಜಿಸ್ಟ್ರೇಟ್‌ ಸಮಕ್ಷಮ ಮರಣೋತ್ತರ ಪರೀಕ್ಷೆ

KannadaprabhaNewsNetwork | Updated : May 26 2024, 12:41 PM IST

ಸಾರಾಂಶ

ತಮ್ಮ ಮಗ ಆದಿಲ್‌ ಲೋ ಬಿ.ಪಿ.ಯಿಂದಾಗಿ ಸಾವನ್ನಪ್ಪಿದ್ದು, ತಮಗೆ ಯಾರ ಮೇಲೂ ಅನುಮಾನ ಇಲ್ಲವೆಂದಿದ್ದ ಮೃತನ ತಂದೆ ಖಲೀಂವುಲ್ಲಾ ನಂತರ ತಮ್ಮ ಮಗನ ಸಾವಿನ ಬಗ್ಗೆ ಅನುಮಾನವಿದೆ ಎಂಬುದಾಗಿ ಉಲ್ಟಾ ಹೊಡೆದಿದ್ದಾರೆ 

  ದಾವಣಗೆರೆ :  ಪೊಲೀಸರು ವಿಚಾರಣೆಗೆಂದು ಕರೆದೊಯ್ದಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಬಡಿಗೆ ಕೆಲಸಗಾರ ಆದಿಲ್‌ (32) ಶವವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶನಿವಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಪ್ರಶಾಂತ್‌ ಅವರ ಸಮ್ಮುಖ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಆದಿಲ್ ನ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಕುಟುಂಬಸ್ಥರ ಸಹಿ ಪಡೆದು ನಡೆಸಲಾಯಿತು. ಶವಪರೀಕ್ಷೆ ವೇಳೆ ಕುಟುಂಬಸ್ಥರನ್ನು ಹೊರತುಪಡಿಸಿ, ಬೇರೆ ಯಾರನ್ನೂ ಶವಾಗಾರದ ಬಳಿ ಬಿಡಲಿಲ್ಲ. ಆದಿಲ್ ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎಂಬುದಕ್ಕೆ ನಿಖರ ಕಾರಣವು ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಟವಾಗಲಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಅನಂತರ ಡಿವೈಎಸ್ಪಿ ನೇತೃತ್ವದಲ್ಲಿ ಒಂದು ಪೊಲೀಸ್ ತುಕಡಿ ಭದ್ರತೆಯಲ್ಲಿ ಕುಟುಂಬಸ್ಥರು ಚನ್ನಗಿರಿ ಪಟ್ಟಣಕ್ಕೆ ಕೊಂಡೊಯ್ದರು. ಚನ್ನಗಿರಿ ಪಟ್ಟಣ ಟಿಪ್ಪು ನಗರದ ಮೃತನ ನಿವಾಸಕ್ಕೆ ಪಾರ್ಥೀವ ಶರೀರ ತರಲಾಯಿತು. ಅಲ್ಲಿಂದ ಪಟ್ಟಣದ ಕೈಮರದ ವೃತ್ತದ ಬಳಿಯ ಈದ್ಗಾ ಮೈದಾನದ ಖಬರಸ್ಥಾನದವರೆಗೆ ಆದಿಲ್ ಶವವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕುಟುಂಬಸ್ಥರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು. ಇನ್ನು 2 ದಿನಗಳ ನಂತರ ಮರಣೋತ್ತರ ಪರೀಕ್ಷೆ ವರದಿಯು ಪೊಲೀಸರ ಕೈ ಸೇರಲಿದ್ದು, ಆ ನಂತರ ಆದಿಲ್ ಸಾವಿಗೆ ಏನು ಕಾರಣವೆಂಬ ಸ್ಪಷ್ಟತೆ ಸಿಗಲಿದೆ.

 ಆದಿಲ್‌ ಸಾವಿನ ಬಗ್ಗೆ ತನಿಖೆಗೆ ತಂದೆ ಒತ್ತಾಯ

- ಮಗ ಲೋ ಬಿ.ಪಿ.ಯಿಂದ ಸಾವನ್ನಪ್ಪಿದ್ದಾನೆ ಎಂದಿದ್ದ ಖಲೀಂವುಲ್ಲಾ

- ಈಗ ಲೋ ಬಿ.ಪಿ.ಯಿಂದ ಸತ್ತಿಲ್ಲ, ಸೂಕ್ತ ತನಿಖೆ ಆಗಬೇಕು ಎಂದು ಹೇಳಿಕೆ ಕನ್ನಡಪ್ರಭ ವಾರ್ತೆ, ದಾವಣಗೆರೆ

ತಮ್ಮ ಮಗ ಆದಿಲ್‌ ಲೋ ಬಿ.ಪಿ.ಯಿಂದಾಗಿ ಸಾವನ್ನಪ್ಪಿದ್ದು, ತಮಗೆ ಯಾರ ಮೇಲೂ ಅನುಮಾನ ಇಲ್ಲವೆಂದಿದ್ದ ಮೃತನ ತಂದೆ ಖಲೀಂವುಲ್ಲಾ ನಂತರ ತಮ್ಮ ಮಗನ ಸಾವಿನ ಬಗ್ಗೆ ಅನುಮಾನವಿದೆ ಎಂಬುದಾಗಿ ಉಲ್ಟಾ ಹೊಡೆದಿದ್ದಾರೆ.

ನನಗೆ ಬಿ.ಪಿ. ಲೋ ಅಂತಾ ಪದೇಪದೇ ಹೇಳಿದ್ದರಿಂದ ನನಗೆ ಬಿ.ಪಿ. ಹೆಚ್ಚಾಗಿತ್ತು. ರಾತ್ರಿಪೂರ್ತಿ ನಿದ್ದೆ ಇಲ್ಲದೇ, ಬಿ.ಪಿ. ಹೆಚ್ಚಾಗಿದ್ದರಿಂದ ಏನೇನೋ ಮಾತನಾಡಿದೆ. ಆದಿಲ್ ಲೋ ಬಿ.ಪಿ. ಆಗಿ ಸಾವನ್ನಪ್ಪಿಲ್ಲ. ಆತನ ಸಾವಿನ ಬಗ್ಗೆ ನನಗೆ ಅನುಮಾನ ಇದೆ. ಆದಿಲ್ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಮೊದಲು ಲೋ ಬಿ.ಪಿ.ಯಿಂದಾಗಿ ಆದಿಲ್‌ ಸಾವನ್ನಪ್ಪಿದ್ದನೆಂದು ಹೇಳಿದ್ದೆ. ನಮಗೆ ಪೊಲೀಸರ ಮೇಲೆ ಅನುಮಾನ ಇದೆ. ಆದಿಲ್‌ ಪ್ರಕರಣ ಬಗ್ಗೆ ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದು ಪುತ್ರಶೋಕದಲ್ಲಿ ಖಲೀಂವುಲ್ಲಾ ಮತ್ತೆ ಆಗ್ರಹಿಸಿದರು.

 ಚನ್ನಗಿರಿ ಆಯಕಟ್ಟಿನಲ್ಲಿ ಬಿಗಿ ಬಂದೋಬಸ್ತ್‌

- ದೃಶ್ಯಾವಳಿ ಆದರಿಸಿ ಆರೋಪಿಗಳ ಬಂಧನ: ಎಸ್‌ಪಿ ಉಮಾ ಕನ್ನಡಪ್ರಭ ವಾರ್ತೆ ದಾವಣಗೆರೆ

ಚನ್ನಗಿರಿಯಲ್ಲಿ ಪೊಲೀಸ್ ಠಾಣೆ, ವಾಹನಗಳ ಮೇಲೆ ಕಲ್ಲು ತೂರಾಟವಾಗಿ, 11 ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ತಡೆಯಲು ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

ಪೊಲೀಸ್ ವಶದಲ್ಲಿದ್ದ ಆದಿಲ್ ಸಾವಿನ ಹಿನ್ನೆಲೆ ಕೆಲವರು ಠಾಣೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಮ್ಮ 11 ಸಿಬ್ಬಂದಿ ಗಾಯಗೊಂಡಿದ್ದಾರೆ. ಆದಿಲ್ ಸಾವಿಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳನ್ನು ಅಮಾನತುಪಡಿಸಿದ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ ಎಂದು ಚನ್ನಗಿರಿಯಲ್ಲಿ ಅವರು ಸ್ಪಷ್ಟಪಡಿಸಿದರು.

ಠಾಣೆ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು, ಘಟನೆ ಕುರಿತಂತೆ ಪೊಲೀಸ್ ಠಾಣೆ ಸುತ್ತಲಿನ ಸಿಸಿ ಟಿವಿ ಕ್ಯಾಮೆರಾ, ನಮ್ಮ ಸಿಬ್ಬಂದಿ ಮಾಡಿಕೊಂಡ ವೀಡಿಯೋಗಳನ್ನು ಗಮನಿಸಿ, ದುಷ್ಕರ್ಮಿಗಳನ್ನು ಬಂಧಿಸಲಾಗುವುದು. ಆದಿಲ್‌ಗೆ ಠಾಣೆಗೆ ವಿಚಾರಣೆಗೆ ಕರೆಸಿದಾಗ ಆತ ನಾಲ್ಕೈದು ನಿಮಿಷ ಸಹ ಠಾಣೆಯಲ್ಲಿ ಇರಲಿಲ್ಲ. ಕರೆ ತಂದ ಕೆಲ ನಿಮಿಷದಲ್ಲೇ ಆತ ಕುಸಿದುಬಿದ್ದಿದ್ದು, ತಕ್ಷಣ ಚನ್ನಗಿರಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದ್ದು, ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಿದರು.

ನ್ಯಾಯಾಧೀಶರ ಸಮಕ್ಷಮ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೃತ ಆದಿಲ್‌ನ ಶವದ ಮರಣೋತ್ತರ ಪರೀಕ್ಷೆ ನಡೆಯಲಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್‌ಪಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Share this article