ಕನ್ನಡಪ್ರಭವಾರ್ತೆ ಶೃಂಗೇರಿ
ಸಹ್ಯಾದ್ರಿ ಪರ್ವತಶ್ರೇಣಿ, ತುಂಗೆಯ ತಟದಲ್ಲಿರುವ ಮಹರ್ಷಿ ವಿಭಾಂಡಕ ಮನಿಗಳ ತಪೋಭೂಮಿಯಾಗಿರುವ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದ ಹನ್ನೊಂದನೇ ದಿನವಾದ ಭಾನುವಾರ ಪಟ್ಟಣದಲ್ಲಿ ವೈಭವಯುತ ಶರನ್ನವರಾತ್ರಿಯ ಶ್ರೀ ಶಾರದಾಂಬಾ ಮಹಾರಥೋತ್ಸವ ನಡೆಯಿತು.ನವರಾತ್ರಿ ಆರಂಭದ ದಿನದಿಂದ ಪಟ್ಟಣದಲ್ಲಿ ಆಗಾಗ ಸುರಿಯುತ್ತಿದ್ದ ಮಳೆರಾಯ ಭಾನುವಾರ ಶಾರದಾಂಬೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಬಿಡುವು ನೀಡಿದ್ದ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ, ಕೆಲವೆಡೆ ಕೆಲವೊಮ್ಮೆ ತುಂತುರು ಮಳೆ ಹನಿಗಳು ಬಿದ್ದರೂ ಬಿಸಿಲ ವಾತಾವರಣವಿತ್ತು. ಬೆಳಗ್ಗೆ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನಂತರ ಶ್ರೀಮಠದ ಎದುರು ರಥದಲ್ಲಿ ಶಾರದಾಂಬೆ ಕುಳ್ಳಿರಿಸಿ ವಿಶೇಷ ಪೂಜೆ, ಮಹಾಮಂಗಳಾರತಿಯ ನಂತರ ರಥೋತ್ಸವ ಪಟ್ಟಣದ ರಥ ಬೀದಿಯಲ್ಲಿ ಸಾಗಿತು. ರಥೋತ್ಸವದ ಮುಂದೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವೂ ಸಾಗಿತು.ರಥಬೀದಿಯಲ್ಲಿ ಶ್ರೀ ಶಾರದಾಂಬೆ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಭಕ್ತರ ಜಯಕಾರ, ನೂರಾರು ವಿಪ್ರೋತ್ತಮರ ವೇದಘೋಷಗಳೊಂದಿಗೆ ಸಾಗಿತು. ಈ ಮಹಾರಥೋತ್ಸವದೊಂದಿಗೆ ಶೃಂಗೇರಿ ನವರಾತ್ರಿ ಉತ್ಸವ ಸಂಪನ್ನಗೊಂಡಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ವೈಭವಯುತವಾಗಿ ಜರುಗಿತು. ಸಕಲ ರಾಜಾಪೋಷಾಕು, ಕಿರೀಟ ತೊಟ್ಟು ಸಕಲ ರಾಜಲಾಂಛನಗಳೊಂದಿಗೆ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳು ರಥದಲ್ಲಿದ್ದ ಶಾರದಾಂಬೆಯ ಎದುರು ಸಾಗುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಭಕ್ತರಲ್ಲಿ ಸಂಭ್ರಮದ ಹೊಳೆ ಹರಿಯಿತು. ದೇಶದ ವಿವಿಧ ಭಾಗಗಳಿಂದ ಭಕ್ತಸಾಗರವೇ ಹರಿದು ಬಂದಿತ್ತು. ಶ್ರೀ ಮಠದ ಆನೆಗಳಾದ ಲಕ್ಷಮಿ, ಜಯಲಕ್ಷಮಿ, ಅಶ್ವಗಳಾದ ಅರ್ಜುನ, ಅಭಿಮನ್ಯು, ಶ್ರೀಮಠದ ಸಾಂಪ್ರದಾಯಿಕ ಛತ್ರಿ-ಛಾಮರ, ಹಗಲು ದೀವಿಟಿಗೆ, ಮಕರ ತೋರಣ, ವಾದ್ಯಮೇಳ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.ಜಾನಪದ ಕಲಾ ತಂಡಗಳು, ಅಡಕೆ ಗೊನೆ ತೆಗೆಯುವ ಸ್ತಬ್ಧಚಿತ್ರ, ವಿಶ್ವಾಮಿತ್ರ, ಹನುಮಂತನ ಸ್ತಬ್ದ ಚಿತ್ರ, ಹುಲಿ ವೇಷ, ಕರಡಿ ವೇಷ, ಡೊಳ್ಳುಕುಣಿತ, ಮರಗಾಲು ನೃತ್ಯ. ಕಂಸಾಳೆ, ಕರಗ ನೃತ್ಯ, ದೇವತೆಯರ ಸ್ತಬ್ಧಚಿತ್ರಗಳು, ವಿವಿಧ ತಂಡಗಳ ಭಜನೆ, ಮಕ್ಕಳ ನೃತ್ಯಗಳು, ವಿವಿಧ ವೇಷದಾರಿಗಳು ಸಂಭ್ರಮ ಇಮ್ಮಡಿಗೊಳಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲುಗಟ್ಟಿ ನಿಂತು ಶ್ರೀ ಶಾರದಾಂಬೆ, ಜಗದ್ಗುರುಗಳ ದರ್ಶನ ಪಡೆದು ಧನ್ಯತಾ ಭಾವ ಹೊಂದಿದರು. ರಥ ಸಾಗುವ ಮುನ್ನ ಶುಭ್ರಗೊಳಿಸಿದ ರಸ್ತೆಯನ್ನು ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವದ ನಂತರ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಅಡ್ಡೆಯಲ್ಲಿ ಮತ್ತು ಬಲಿ ಮೂರ್ತಿಯನ್ನು ತಲೆಯಲ್ಲಿ ಹೊತ್ತು ದೇಗುಲದ ಪ್ರಾಂಗಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಬಂದಾಗ ಜಗದ್ಗುರುಗಳು ರಥಕ್ಕೆ ಅಭಿಮುಖವಾಗಿ ಹೆಜ್ಜೆ ಹಾಕಿದರು.ನವರಾತ್ರಿ 9 ದಿನಗಳ ಕಾಲ ಸಂಪ್ರದಾಯದಂತೆ ನಡೆಯುತ್ತಿದ್ದ ಐತಿಹಾಸಿಕ ದಸರೆ ದರ್ಬಾರ್ ನಂತರ ಭಾನುವಾರ ಹಗಲು ದರ್ಬಾರ್ ನಡೆಯಿತು. ವೇದ ಪಠಣ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶೃಂಗೇರಿ ಶಾರದೆ ಮತ್ತೆ ಮೂರುದಿನಗಳ ಕಾಲ ಭುವನೇಶ್ವರಿಯಾಗಿ, ಕಾಮದೇನುವಾಗಿ, ಇಂದ್ರಾಣಿಯಾಗಿ ವಿಜೃಂಬಿಸಲಿದ್ದಾಳೆ. ಭೂಮಿ ಹುಣ್ಣಿಮೆಯಂದು ಶಾರದೆಗೆ ಮತ್ತೆ ಮಹಾಭಿಷೇಕ ನಡೆಯಲಿದ್ದು ಅಂದು ಶಾರದೆಗೆ ತುಂಗಾನದಿಯಲ್ಲಿ ತೆಪ್ಪೋತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ನವರಾತ್ರಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.ಹರಿದು ಬಂದ ಜನಸಾಗರ
ಶೃಂಗೇರಿ ಪಟ್ಟಣಕ್ಕೆ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಶ್ರೀಮಠ, ಭಾರತೀ ಬೀದಿ, ಶೃಂಗೇರಿ ಪಟ್ಟಣ, ಗಾಂಧಿ ಮೈದಾನ ಎಲ್ಲೆಲ್ಲೂ ಜನಜಂಗುಳಿ. ವಾಹನ ನಿಲುಗಡೆ ಪ್ರದೇಶ ಗಾಂಧಿಮೈದಾನ ವಾಹನಗಳಿಂದ ತುಂಬಿ ಜಾಗವಿಲ್ಲದೆ ಎಲ್ಲೆಡೆ ವಾಹನಗಳು ನಿಲುಗಡೆಯಾಗಿ ಜನಸಂಚಾರ ಅಸ್ತವ್ಯಸ್ತ ಗೊಂಡಿತ್ತು.ಶನಿವಾರ ಸಂಜೆ ವಿಜಯ ದಶಮಿ ಅಂಗವಾಗಿ ವಿಜಯೋತ್ಸವ, ಶಮೀಪೂಜೆ ನಡೆದವು. ಶ್ರೀಮಠದಲ್ಲಿ ಎಂದಿನಂತ ಜಗದ್ಗುರುಗಳು ರಾಮಾಯಣ ಪಾರಾಯಣ ನೆರವೇರಿಸಿದರು. ಸಂಜೆ ಎಂದಿನಂತೆ ಶಾರದಾ ವಿಜಯೋತ್ಸವ ಸಂಭ್ರಮದಿಂದ ನಡೆಯಿತು. ಕಾಳಿಕಾಂಬಾ ದೇವಾಲಯಕ್ಕೆ ತೆರಳಿ ಅಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಶ್ರೀಮಠಕ್ಕೆ ಮೆರವಣಿಗೆ ಹಿಂತಿರುಗಿತು.