ಚಿತ್ರದುರ್ಗದಲ್ಲಿ ಡಿಜೆ ಸದ್ದಿನೊಂದಿಗೆ ಮಹಾಗಣಪತಿ ವಿಸರ್ಜನೆ

KannadaprabhaNewsNetwork |  
Published : Sep 14, 2025, 01:04 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್    | Kannada Prabha

ಸಾರಾಂಶ

ಹಿಂದೂ ಮಹಾಗಣಪತಿ ಎಂದರೆ ‘ಡಿಜೆ’ ಎಂಬ ಮಾತು ಶನಿವಾರ ಪ್ರಾರಂಭಿಕ ಗೊಂದಲದ ನಡುವೆಯೂ ನಿಜವಾಯಿತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳದ ಹಗ್ಗಜಗ್ಗಾಟದ ನಡುವೆ ಕೊನೆಗೂ 6 ಡಿಜೆಗಳು ಪ್ರತಿ ವರ್ಷದಂತೆ ಆರ್ಭಟಿಸಿದವು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿಂದೂ ಮಹಾಗಣಪತಿ ಎಂದರೆ ‘ಡಿಜೆ’ ಎಂಬ ಮಾತು ಶನಿವಾರ ಪ್ರಾರಂಭಿಕ ಗೊಂದಲದ ನಡುವೆಯೂ ನಿಜವಾಯಿತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳದ ಹಗ್ಗಜಗ್ಗಾಟದ ನಡುವೆ ಕೊನೆಗೂ 6 ಡಿಜೆಗಳು ಪ್ರತಿ ವರ್ಷದಂತೆ ಆರ್ಭಟಿಸಿದವು.

ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳದ ನೇತೃತ್ವದಲ್ಲಿ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ್ದ ‘ಹಿಂದೂ ಮಹಾಗಣಪತಿ’ಯ ವಿಸರ್ಜನಾ ಮೆರವಣಿಗೆ ಬೃಹತ್‌ ಶೋಭಾಯಾತ್ರೆಯೊಂದಿಗೆ ಎರಡು ಲಕ್ಷಕ್ಕೂ ಅಧಿಕ ಜನರ ನಡುವೆ ಸಾಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಗರದಂತೆ ಹರಿದು ಬಂದ ಜನರು ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ಒಂದೂವರೆ ಸುಮಾರಿಗೆ ಜೈನಧಾಮದಿಂದ ಹೊರಟ ಗಣೇಶ ಮೂರ್ತಿಗೆ ವೈಶಾಲಿ ಕ್ರಾಸ್‌ ಬಳಿ ಪುಷ್ಪಾರ್ಚನೆ ಮಾಡಲಾಯಿತು. ಚಂದ್ರವಳ್ಳಿಯಲ್ಲಿ ನಿರ್ಮಿಸಿದ ಬಾವಿಯಲ್ಲಿ ತಡರಾತ್ರಿ ವಿಸರ್ಜನೆ ಮಾಡಲಾಯಿತು.

ಶುಕ್ರವಾರ ಸಂಜೆಯಿಂದ ‍ಶೋಭಾಯಾತ್ರೆಗೆ ಮಂಟದಲ್ಲಿ ಪ್ರಾರಂಭವಾದ ಸಿದ್ಧತೆಗಳು ಶನಿವಾರ ಮುಂಜಾನೆವರೆಗೂ ನಡೆದವು. ಮೆರವಣಿಗೆಗೂ ಮುನ್ನ ಅರ್ಚಕರು ಗಣಪತಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಸಂಸದ ಗೋವಿಂದ ಎಂ.ಕಾರಜೋಳ ಶಿವಲಿಂಗಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಗಣಪತಿಗೆ ಪುಷ್ಪಾರ್ಚನೆ ಮಾಡಿ ವಿಧ್ಯುಕ್ತ ಚಾಲನೆ ನೀಡಿದರು.

ಕೇಸರಿ ಧ್ವಜ, ಬಂಟಿಂಗ್ಸ್‌ ರಾರಾಜಿಸಿದವು. ಜನಸಾಗರದ ನಡುವೆ ಭವ್ಯವಾಗಿ ಸಾಗಿದ ಏಕದಂತನನ್ನು ರಸ್ತೆಯ ಎರಡೂ ಬದಿಯಲ್ಲಿ ನಿಂತ ಭಕ್ತರು ಕಣ್ತುಂಬಿಕೊಂಡರು. ಗಣಪತಿ ಮೂರ್ತಿಯ ಎದುರು ಭಕ್ತರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ತುಮಕೂರು, ಬಳ್ಳಾರಿ, ಶಿವಮೊಗ್ಗ, ಬೆಂಗಳೂರು, ವಿಜಯನಗರ, ಹಾಸನ, ಹಾವೇರಿ ಸೇರಿ ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

ಮೆರವಣಿಗೆಯುದ್ದಕ್ಕೂ ‘ಜೈ ಶ್ರೀರಾಮ್‌’, ‘ಭಾರತ್‌ ಮಾತಕೀ ಜೈ’, ‘ಗಣಪತಿ ಬಪ್ಪ ಮೋರಯಾ’ ಘೋಷಣೆಗಳು ಪುಂಖಾನುಪುಂಖವಾಗಿ ಮೊಳಗಿದವು. ಕೇಸರಿ ಶಲ್ಯ, ಹಣೆಗೆ ತಿಲಕ ಇಟ್ಟುಕೊಂಡಿದ್ದ ಯುವಪಡೆ ಹುಮ್ಮಸ್ಸಿನಿಂದ ಕಾಣಿಸಿಕೊಂಡಿತು. ಬಹುತೇಕರು ‘ಓಂ’ ಎಂದು ಬರೆದುಕೊಂಡಿದ್ದ ಟೀಶರ್ಟ್‌ ಧರಿಸಿ ತಲೆಗೆ ಕೇಸರಿ ಪೇಟ ಧರಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗುಂಪುಗುಂಪಾಗಿ ಯುವಕ, ಯುವತಿಯರು ಡಿಜೆ ಸದ್ದಿಗೆ ನೃತ್ಯ ಪ್ರದರ್ಶಿಸಿದರು.

ಮದಕರಿ ನಾಯಕನ ವೃತ್ತಕ್ಕೆ ಮೆರವಣಿಗೆ ಬರುವಷ್ಟರಲ್ಲಿ ಇಳಿಹೊತ್ತು ನಾಲ್ಕರ ಸಮೀಪಿಸಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಕುಣಿದು ಸಂಭ್ರಮಿಸಿದರು. ಮಂಗಳೂರಿನ ಚಂಡಿ ವಾದ್ಯ, ನಾಸಿಕ್ ಡೋಲ್, ದಾವಣಗೆರೆಯ ನಾಸಿಕ್ ಡೋಲ್, ಚಿತ್ರದುರ್ಗದ ಡೊಳ್ಳು ಕುಣಿತ, 10ಕ್ಕೂ ಹೆಚ್ಚು ಸ್ಥಳೀಯ ಕಲಾ ತಂಡಗಳ ಜತೆ ಶೋಭಾಯಾತ್ರೆಯಲ್ಲಿ 6 ಡಿಜೆಗಳು ಅಬ್ಬರಿಸಿದವು.

ಎಲ್ಲೆಲ್ಲೂ ಪೊಲೀಸ್‌ ಬಿಗಿ ಭದ್ರತೆ:

ಚಿತ್ರದುರ್ಗ ಜಿಲ್ಲೆ ಹಾಗೂ ಬೆಂಗಳೂರು ನಗರ ಸೇರಿದಂತೆ ಹೊರ ಜಿಲ್ಲೆಗಳಿಂದ 9 ಎಎಸ್‌ಪಿ, 28 ಡಿಎಸ್‌ಪಿ, 78 ಪಿಐ, 175 ಪಿಎಸ್‌ಐ, 401 ಎಎಸ್‌ಐ, 2678 ಹೆಚ್‌.ಸಿ, ಪಿಸಿ, 500 ಹೋಮ್‌ ಗಾರ್ಡ್ ಹಾಗೂ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ 16 ತುಕಡಿಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 14 ತುಕಡಿಗಳು ಮತ್ತು ರ‍್ಯಾಪಿಡ್‌ ಆಕ್ಷನ್‌ ಪೋರ್ಸ್‌ ಕಾರ್ಯ ನಿರ್ವಹಿಸಿತು.

ನಗರದಾದ್ಯಂತ ಪ್ರಮುಖ 151 ಸ್ಥಳಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾಗಳು ಮತ್ತು 26 ಕಣ್ಗಾವಲು ವೇದಿಕೆ, 67 ವಿಡಿಯೋ ಕ್ಯಾಮೆರಾ, 49 ಸ್ಕೈ ಸೆಂಟ್ರಿಗಳ ಮೂಲಕ ಹದ್ದಿನ ಕಣ್ಣಿಟ್ಟಿದ್ದರು. ಎಸ್‌ಜೆಎಂ ಡೆಂಟಲ್ ಕಾಲೇಜ್‍ನಲ್ಲಿ ಕಮಾಂಡ್ ಸೆಂಟರ್‌ನಲ್ಲಿ ಶೋಭಾಯಾತ್ರೆ ಮಾರ್ಗದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ವೀಕ್ಷಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ಎಸ್‌.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪ್ರಭಂಜನ್‌, ಶರಣ್ ಕುಮಾರ್, ಉಮೇಶ್ ಕಾರಜೋಳ, ಕೇಶವ್‌, ಷಡಾಕ್ಷರಪ್ಪ, ಡಾ.ಮಂಜುನಾಥ್‌, ಜಿ.ಎಸ್‌.ಅನಿತ ಕುಮಾರ್, ಡಾ.ಸಿದ್ಧಾರ್ಥ ಇತರರು ಇದ್ದರು.

ದಾರಿಯುದ್ದಕ್ಕೂ ಪ್ರಸಾದ ವಿತರಣೆ

ಮೆರವಣಿಗೆಯಲ್ಲಿ ಸಾಗುವ ಭಕ್ತರಿಗೆ ಉಚಿತ ನೀರು, ಊಟ ವಿತರಿಸಲಾಯಿತು. ಮಧ್ಯಾಹ್ನ 12ಕ್ಕೆ ಆರಂಭವಾದ ಪ್ರಸಾದ ವಿತರಣೆ ರಾತ್ರಿವರೆಗೂ ಮುಂದುವರಿಯಿತು. ಮದಕರಿನಾಯಕ ವೃತ್ತ, ಜಿಲ್ಲಾ ಗ್ರಂಥಾಲಯ, ತರಾಸು ರಂಗಮಂದಿರ, ಕಣಿವೆಮಾರಮ್ಮ ದೇಗುಲ, ಮಹಾವೀರ ವೃತ್ತ, ಎಸ್‌ಬಿಐ ವೃತ್ತ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯಲ್ಲಿ ಪ್ರಸಾದ ವಿತರಣೆಗೆ ಪಾದಚಾರಿ ಮಾರ್ಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು