ರಾಜ್ಯದ ಗಡಿಯಲ್ಲಿ ಮಹಾ ಮದ್ಯ ದರ್ಬಾರ!

KannadaprabhaNewsNetwork |  
Published : Jun 28, 2024, 12:45 AM IST
ಮದ್ಯ ಮಾರಾಟ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡಿದ್ದರಿಂದ ನಮ್ಮ ರಾಜ್ಯದ ಮದ್ಯಪ್ರಿಯರು ಪಕ್ಕದ ಮಹಾರಾಷ್ಟ್ರ ಮದ್ಯಕ್ಕೆ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗಡಿಭಾಗದ ಪ್ರದೇಶಗಳಲ್ಲಿನ ಅಂಗಡಿಕಾರರು ಕಡಿಮೆ ಬೆಲೆಗೆ ಅನ್ಯ ರಾಜ್ಯದ ಮದ್ಯ ತಂದು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಇದರಿಂದ ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡಿದ್ದರಿಂದ ನಮ್ಮ ರಾಜ್ಯದ ಮದ್ಯಪ್ರಿಯರು ಪಕ್ಕದ ಮಹಾರಾಷ್ಟ್ರ ಮದ್ಯಕ್ಕೆ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗಡಿಭಾಗದ ಪ್ರದೇಶಗಳಲ್ಲಿನ ಅಂಗಡಿಕಾರರು ಕಡಿಮೆ ಬೆಲೆಗೆ ಅನ್ಯ ರಾಜ್ಯದ ಮದ್ಯ ತಂದು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಇದರಿಂದ ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಮಾತ್ರವಲ್ಲ, ಅಕ್ರಮ ಮಾರಾಟದ ವಾಸನೆ ಇದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಸಾರ್ವಜನಿಕರೇ ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಾಗಿದೆ. ಇದರಿಂದ ಗಡಿಭಾಗದಲ್ಲಿ ಮಹಾರಾಷ್ಟ್ರ ರಾಜ್ಯದ ಮದ್ಯ ಮಾರಾಟ ಜೋರಾಗಿದೆ. ರಾಜ್ಯ ಸರ್ಕಾರ ಮದ್ಯದ ದರ ಏರಿಕೆ ಮಾಡಿದ ನಂತರ ಜಿಲ್ಲೆಯ ಅಥಣಿ ಮತ್ತು ಕಾಗವಾಡ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಮಹಾರಾಷ್ಟ್ರದ ಮದ್ಯವೇ ಸರಬರಾಜಾಗುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಒಂದು ಕ್ವಾಟರ್ ಮದ್ಯಕ್ಕೆ (ಮದ್ಯದ ಕಂಪನಿಗಳಿಗೆ ಅನುಗುಣವಾಗಿ) ಸುಮಾರು ₹150 ವ್ಯತ್ಯಾಸವಿದೆ. ಹೀಗಾಗಿ, ದಂಧೆಕೋರರು ಅಲ್ಲಿಂದ ಕಡಿಮೆ ಬೆಲೆಗೆ ಮದ್ಯ ತಂದು ಕರ್ನಾಟಕದ ಗಡಿ ಗ್ರಾಮಗಳಲ್ಲಿ ಹೋಟೆಲ್‌, ಪಾನ್‌ಶಾಪ್‌ಗಳಲ್ಲಿ ತಂಪು ಪಾನೀಯ ರೀತಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ.

ಮಹಾ ಮದ್ಯದಿಂದ ಬೊಕ್ಕಸಕ್ಕೆ ಹೊಡೆತ:

ಕರ್ನಾಟಕದ ಗಡಿ ಜಿಲ್ಲೆಯಲ್ಲಿ ನೆರೆಯ ಮಹಾರಾಷ್ಟ್ರದ ಮದ್ಯ ಲಗ್ಗೆ ಇಟ್ಟ ಪರಿಣಾಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಹೊಡೆತ ಬೀಳುತ್ತಿದೆ. ಒಂದು ಕಡೆಯಿಂದ ಸರ್ಕಾರಕ್ಕೆ ಹಾನಿಯಾಗುತ್ತಿದ್ದರೆ, ಇನ್ನೊಂದೆಡೆ ಕಾನೂನು ಉಲ್ಲಂಘನೆ ನಿರಂತರವಾಗಿರುವುದರಿಂದ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆ ಎನ್ನುವ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ. ಕೇವಲ ಐದಾರು ಕಿ.ಮೀ. ಅಂತರದಲ್ಲಿ ನೂರು, ನೂರೈವತ್ತು ರೂಪಾಯಿ ವ್ಯತ್ಯಾಸದ ಪರಿಣಾಮ ಈ ದಂಧೆಯ ಘಾಟು ಜೋರಾಗಿದೆ. ಇದು ಕಳ್ಳ ದಂಧೆಗೂ ದಾರಿ ಮಾಡಿಕೊಡುತ್ತಿದೆ. ಮದ್ಯಪ್ರಿಯರು ಹೋಗಿ ಮದ್ಯ ಸೇವಿಸಿ ಇಲ್ಲವೇ ಪಾರ್ಸಲ್ ತೆಗೆದುಕೊಂಡು ಬರುತ್ತಿದ್ದಾರೆ. ಆದರೆ, ಹೋಟೆಲ್‌, ಪಾನ್‌ ಶಾಪ್‌ಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳ ದಂಧೆಗೆ ಇಳಿದಿದ್ದಾರೆ. ಅಲ್ಲಿ ಕಡಿಮೆ ಬೆಲೆಗೆ ತಂದು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯ:

ಇಲ್ಲಿ ರಾಜಾರೋಷವಾಗಿ ಮಹಾರಾಷ್ಟ್ರದ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಸ್ಥಳೀಯರು ಅಬಕಾರಿ ಇಲಾಖೆ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಕ್ರಮಕ್ಕೆ ಏಕೆ ಮುಂದಾಗುತ್ತಿಲ್ಲ ಎಂಬ ಅನುಮಾನ ಕೂಡ ಮೂಡುತ್ತಿದೆ. ಇದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೇ ಅಬಕಾರಿ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ. ಇನ್ನು, ಮಂಗಳವಾರ ಕಾಗವಾಡ ಕೆಡಿಪಿ ಸಭೆಯಲ್ಲಿ ಮಹಾರಾಷ್ಟ್ರ ಅಕ್ರಮ ಮದ್ಯದ ಕುರಿತು ತೀವ್ರ ಚರ್ಚೆಯಾಗಿದ್ದು, ಸಭೆಯಲ್ಲಿ ಶಾಸಕ ರಾಜು ಕಾಗೆ ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

------------------------------

ಕೋಟ್..........

ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಾಗಿರುವುದು ನಿಜ. ಆದರೆ, ಮಹಾರಾಷ್ಟ್ರದಿಂದ ಇಲ್ಲಿಗೆ ಮದ್ಯ ತಂದು ಅದನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಕಾನೂನು ಉಲ್ಲಂಘಿಸಲಾಗುತ್ತಿದೆ. ರಾಜ್ಯದ ಗಡಿ ಭಾಗದ ಕೆಲ ಹಳ್ಳಿಗಳಲ್ಲಿನ ಹೋಟೆಲ್‌, ಪಾನ್‌ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ.

- ರಾಜು ಕಾಗೆ, ಶಾಸಕರು, ಕಾಗವಾಡಮಹಾರಾಷ್ಟ್ರದಲ್ಲಿನ ಮದ್ಯದ ದರಕ್ಕೂ ರಾಜ್ಯದಲ್ಲಿನ ಮದ್ಯದ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ, ಗಡಿ ಭಾಗದ ಜನತೆ ಮಹಾರಾಷ್ಟ್ರಕ್ಕೆ ಹೋಗಿ ಮದ್ಯ ಸೇವಿಸಿ ಅಥವಾ ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಬಂದರೆ ಪರವಾಗಿಲ್ಲ. ಆದರೆ, ಇದನ್ನೇ ದುರಪಯೋಗ ಮಾಡಿಕೊಂಡು ಅಕ್ರಮ ದಂಧೆಗೆ ಮುಂದಾಗಿದ್ದಾರೆ. ಅಂಥವರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅಂಥ ಕುಳಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

- ಸಂಜಯ ಕುಚನೂರೆ, ನ್ಯಾಯವಾದಿಗಳು, ಪಪಂ ಸದಸ್ಯರು ಐನಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ