ಮಹದಾಯಿ ಅನುಮತಿ, 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಿ

KannadaprabhaNewsNetwork |  
Published : Oct 04, 2026, 02:00 AM IST
ವಿಮಾನ ನಿಲ್ದಾಣಗಳಲ್ಲಿ ಕನ್ನಡಿಗರ ಹೆಸರು ನಾಮಕರಣಕ್ಕೆ ಒತ್ತಾಯಿಸಿ ರಾಜ್ಯದ ಐದು ವಿಮಾನ ನಿಲ್ದಾಣಗಳ ಕನ್ನಡಿಗರ ಹೆಸರು ನಾಮಕರಣ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಿಮಾನ ನಿಲ್ದಾಣಗಳ ಹೆಸರು ಬದಲಾವಣೆ ಕುರಿತು ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರಿಗೆ ಹಲವು ಬಾರಿ ಪತ್ರ ಬರೆದಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಸಚಿವರಿಂದ ಪ್ರತಿಕ್ರಿಯೆ ಬಂದಿದ್ದರೂ ಅಂತಿಮ ಆದೇಶ ಹೊರಬಿದ್ದಿಲ್ಲ.

ಹುಬ್ಬಳ್ಳಿ:

ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಬಾಕಿ ಇರುವ ಕೇಂದ್ರ ಇಲಾಖೆಗಳ ಅನುಮತಿ ಕೊಡಿಸಿ ಕಾಮಗಾರಿ ಆರಂಭಿಸಬೇಕು ಹಾಗೂ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಡಿನ ಗಣ್ಯರ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ತ್ವರಿತಗೊಳಿಸಲು ಒತ್ತಾಯಿಸಿ ಶನಿವಾರ ರಾಜ್ಯದ ಐದು ವಿಮಾನ ನಿಲ್ದಾಣಗಳ ಕನ್ನಡಿಗರ ಹೆಸರು ನಾಮಕರಣ ಸಮಿತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರನ್ನು ನಾಮಕರಣಗೊಳಿಸುವಂತೆ ಈ ಹಿಂದೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದ್ದು, ಅದನ್ನು ಶೀಘ್ರ ಅನುಮೋದಿಸಬೇಕು ಎಂದು ಮನವಿ ಮಾಡಲಾಯಿತು.

ವಿಮಾನ ನಿಲ್ದಾಣಗಳ ಹೆಸರು ಬದಲಾವಣೆ ಕುರಿತು ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರಿಗೆ ಹಲವು ಬಾರಿ ಪತ್ರ ಬರೆದಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಸಚಿವರಿಂದ ಪ್ರತಿಕ್ರಿಯೆ ಬಂದಿದ್ದರೂ ಅಂತಿಮ ಆದೇಶ ಹೊರಬಿದ್ದಿಲ್ಲ. ಆದರಿಂದ ತಕ್ಷಣ ತಾವು ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಈ ಕುರಿತು ಕ್ರಮಕೈಗೊಳ್ಳಲು ಒತ್ತಾಯಿಸಬೇಕೆಂದು ತಿಳಿಸಿದರು.

ಅ. 12ರಂದು ದೆಹಲಿಯಲ್ಲಿ ರೈತರ ಬೇಡಿಕೆಗಳ ಕುರಿತು ನಡೆಯಲಿರುವ ಸಭೆಯಲ್ಲಿ ಮಹದಾಯಿ ವಿಷಯವನ್ನೂ ಪ್ರಸ್ತಾಪಿಸಿ ಕೇಂದ್ರದ ಬಾಕಿ ಅನುಮತಿಗಳನ್ನು ಶೀಘ್ರ ಪಡೆಯಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.

ಈ ವೇಳೆ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್‌. ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ್, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕಾರ, ಸಮಿತಿ ರಾಜ್ಯ ಸಂಚಾಲಕ ಶಿವಾನಂದ ಮುತ್ತಣ್ಣವರ, ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಮಲ್ಲಿಕಾರ್ಜುನ ತಾಲೂರ, ಚಂದ್ರಣ್ಣ ಕಟಗಿ, ಮಲ್ಲಿಕಾರ್ಜುನ ಕುಣ್ಣೂರ, ಪ್ರಭು ನವಲಗುಂದಮಠ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕನೂರ ಪರ ಜೋಶಿ ಪ್ರಚಾರ
ಜೋಶಿ ವಿರುದ್ಧ ಅವಹೇಳನಕಾರಿ ಭಾಷಣ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ