ಕನ್ನಡಪ್ರಭವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಸ್ಥಳವನ್ನು ತಜ್ಞರ ಅಭಿಪ್ರಾಯ ಮೇರೆಗೆ ದೀಪದ ಗಿರಿ ವಡ್ಡುವಿನ 108 ಅಡಿ ಪ್ರತಿಮೆ ಆವರಣದ ಬದಲಾಗಿ ನೂತನ 376 ವಸತಿಗೃಹದ ಮುಂಭಾಗದ ಖಾಲಿ ನಿವೇಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.ಮಲೆಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಆವರಣದ ದೀಪದಗಿರಿ ಒಡ್ಡಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ತಜ್ಞರ ಅಭಿಪ್ರಾಯ ಮೇರೆಗೆ ಸ್ಥಳ ಬದಲಾಯಿಸಲಾಗಿದೆ ಎಂದರು. ದೀಪದ ಗಿರಿ ಒಡ್ಡು ತುಂಬಾ ಎತ್ತರ ಪ್ರದೇಶ ಆಗಿರುವುದರಿಂದ ಆ ಸ್ಥಳದಲ್ಲಿ ವಿಪರೀತ ಗಾಳಿ ಬೀಸುವ ಕಾರಣದಿಂದ ಸಭೆ ನಡೆಸಲು ತೊಡಕುಂಟಾಗಬಹುದು. ಜೊತೆಗೆ ಮಳೆ ಸಂದರ್ಭದಲ್ಲಿ ಈ ಸ್ಥಳವು ಸೂಕ್ತವಲ್ಲ. ಇಲ್ಲಿ ಕಲ್ಲು ಮಣ್ಣು ಮಿಶ್ರಿತವಾಗಿರುವುದರಿಂದ ಸಭೆ ಮಾಡಲು ಹಾಕಲಾಗುವ ಶಾಮಿಯಾನಗಳು ಬಿಗಿ ಇರುವುದಿಲ್ಲ. ಹೀಗಾಗಿ ಸುರಕ್ಷಿತ ದೃಷ್ಟಿ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ.
ನೂತನ 376 ಕೊಠಡಿ ಮುಂಬಾಗ ಸಭೆಗೆ ಬರುವ ವಾಹನಗಳನ್ನು ನಿಲ್ಲಿಸಲು ಆಯೋಜಿಸಲಾಗಿತ್ತು, ಇದೀಗ ಸಚಿವ ಸಂಪುಟ ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗಿದ್ದು, ವಾಹನಗಳ ನಿಲುಗಡೆಯನ್ನು ನೂತನ ವಸತಿ ಗೃಹದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಆಯೋಜಿಸಲಾಗಿದೆ ಎಂದರು.ಬೆಟ್ಟದಲ್ಲೇ ಶಾಸಕ ಮಂಜುನಾಥ್ ಮುಕ್ಕಾಂ:
ಮಲೆಮಹದೇಶ್ವರ ಬೆಟ್ಟದಲ್ಲಿ ಏ.24ರಂದು ನಡೆಯುವ ಕ್ಯಾಬಿನೆಟ್ ಸಭೆ ನಡೆಯುವ ಸ್ಥಳ ಬದಲಾವಣೆ ಆಗಿರುವುದರಿಂದ ಬೆಳಗ್ಗೆಯಿಂದಲೇ 376 ಕೊಠಡಿಯ ಮುಂಭಾಗದ ಸ್ಥಳವನ್ನು ಪರಿಶೀಲನೆ ನಡೆಸಿ, ಸ್ಥಳದಲ್ಲೇ ಶಾಸಕರು ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳು ಬರದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್, ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್,ಡಿ.ವೈ ಎಸ್. ಪಿ ಧರ್ಮೇಂದ್ರ,ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ,ಮಹದೇವಸ್ವಾಮಿ, ಮುಖಂಡರಾದ ರಾಜುಗೌಡ, ಡಿ.ಕೆ ರಾಜು, ವಿಜಯ್ ಕುಮಾರ್ ,ಸುರೇಶ್, ಹಾಗೂ ಪ್ರಾಧಿಕಾರದ ಸಿಬ್ಬಂದಿ ಉಪಸ್ಥಿತರಿದ್ದರು.