ಕನ್ನಡಪ್ರಭ ವಾರ್ತೆ ಹನೂರುಪಟ್ಟಣದ ಬಿಪಿಸಿಎಲ್ ಪೆಟ್ರೋಲ್ ಬಂಕ್ ನಿಂದ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಅರಣ್ಯ ಇಲಾಖೆ ನರ್ಸರಿ ವರೆಗಿನ ರಸ್ತೆ ಕಾಮಗಾರಿ ಅಪೂರ್ಣಗೊಂಡು ಸ್ಥಗಿತಗೊಂಡಿರುವುದನ್ನು ವಿರೋಧಿಸಿ ರಾಜ್ಯ ಛಲವಾದಿ ಮಹಾಸಭಾ ಹನೂರು ಶಾಖೆ, ಹನೂರು ತಾಲೂಕು ಛಲವಾದಿ ಮಹಾಸಭಾ ಸಮಿತಿ ವತಿಯಿಂದ ಕಪ್ಪುಪಟ್ಟಿ ಧರಿಸಿ ರಸ್ತೆ ತಡೆ ನಡೆಸಿದರು.ಕಾಮಗಾರಿ ಅಪೂರ್ಣಗೊಂಡ ರಸ್ತೆ ಮಾರ್ಗದಲ್ಲಿ ಧರಣಿ ನಡೆಸಿದ ಪ್ರತಿಭಟನಾನಿರತರು ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಗುರುಪ್ರಸಾದ್, ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಸಹಾಯಕ ಅಭಿಯಂತರ ಮಹೇಶ್ ಸ್ಥಳಕ್ಕೆ ಆಗಮಿಸಿದರು. ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ಲಕ್ಷಾಂತರ ಮಂದಿ ಬಂದು ಹೋಗುವ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯನ್ನು ಅಧೋಗತಿಗೆ ತಂದು ಇಟ್ಟಿದ್ದಾರೆ. ಈ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಕಲ್ಲು ಮಣ್ಣು ಧೂಳು ಸಹಿತ ಗುಂಡಿ ಬಿದ್ದ ರಸ್ತೆಯಿಂದ ವಾಹನ ಸವಾರರು ಬಿದ್ದು ಸಾವನಪ್ಪಿದ್ದಾರೆ ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದರು.ಧೂಳಿನಿಂದ ಬೆಳೆಗಳು ಹಾಳಾಗಿ ಹೋಗಿವೆ, ರೈತನಿಗಾಗಿರುವ ನಷ್ಟ ಯಾರು ಬರಿಸುತ್ತಾರೆ ಜಾನುವಾರುಗಳಿಗೆ ಸಂಗ್ರಹಿಸಲಾಗಿರುವ ಹುಲ್ಲಿನ ಮೆದೆ ದೂಳು ಮಣ್ಣಿನಿಂದ ಆವೃತವಾಗಿ ಇದನ್ನು ತಿಂದ ಜಾನುವಾರುಗಳಿಗೆ ಬೇದಿ ಕಾಣಿಸಿಕೊಂಡಿದೆ ಎಂದು ದೂರಿದರು.ಅವಧಿ ಮುಗಿದಿದ್ದರೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲದೇ ಇರುವುದರಿಂದ ಸಾರ್ವಜನಿಕರು ಓಡಾಟಕ್ಕೆ ಪರದಾಡುವಂತಾಗಿದೆ. ಮುಂದೆ ರಸ್ತೆಯನ್ನು ಕಿರಿದಾಗಿ ಮಾಡಲಾಗಿದೆ ಅದನ್ನು ವಿಸ್ತರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಸ್ಥಗಿತಗೊಂಡಿರುವ ಕಾಮಗಾರಿಯನ್ನು ಕೈಗೊಳ್ಳದಿದ್ದರೆ ನಿರಂತರ ಹೋರಾಟವನ್ನು ಕೈಗೊಳ್ಳಲಾಗುವುದು, ಮುಂಬರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ರಸ್ತೆ ತಡೆ ನಡೆಸುತ್ತೇವೆ, ಕಾಮಗಾರಿ ಕೈಗೊಳ್ಳದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.ಹನೂರು ತಾಲೂಕು ಛಲವಾದಿ ಮಹಾಸಭಾ ಸಮಿತಿಯ ಅಧ್ಯಕ್ಷ ಹನೂರು ಬಸವರಾಜು ಮಾತನಾಡಿ, ಗುತ್ತಿಗೆದಾರರು ಸರ್ಕಾರ ಹಣ ನೀಡಿಲ್ಲ ಎಂದು ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಮೊದಲೇ ಪೂರ್ತಿ ಹಣ ಬಿಡುಗಡೆ ಮಾಡಿದರೆ ನಾನು ಕೂಡ ಮಲೆ ಮಹದೇಶ್ವರ ಬೆಟ್ಟದವರಿಗೂ ಕಾಮಗಾರಿಯನ್ನು ಮಾಡುತ್ತೇನೆ. ಮಲೆಮಹದೇಶ್ವರ ಬೆಟ್ಟ ದೇವಾಲಯಕ್ಕೆ ತಿಂಗಳಿಗೆ ಕೋಟ್ಯಂತರ ರು. ಆದಾಯ ಬರುತ್ತದೆ. ಈ ಅನುದಾನವನ್ನು ಹನೂರು ಭಾಗದ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು. ರಾಜ್ಯದ ಮುಖ್ಯಮಂತ್ರಿ ಅವರು ಅಧ್ಯಕ್ಷರಾಗಿರುವ ಪ್ರಾಧಿಕಾರದ ನಿಯಮಗಳಲ್ಲಿ ಬದಲಾವಣೆ ತಂದು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಸ್ಥಗಿತಗೊಂಡಿರುವ ಕಾಮಗಾರಿ ಇಂದಿನಿಂದಲೇ ಪ್ರಾರಂಭಗೊಳ್ಳಬೇಕು ಕಳಪೆ ಕಾಮಗಾರಿಯೂ ಆಗಿರುವ ರಸ್ತೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಿಇಒಗೆ ತಟ್ಟಿದ ಪ್ರತಿಭಟನೆ ಬಿಸಿ ಯೂಟರ್ನ್: ಕಾರ್ಯನಿಮಿತ್ತ ಹನೂರು ಮಲೆ ಮಹದೇಶ್ವರ ಬೆಟ್ಟ ಮಾರ್ಗವಾಗಿ ತೆರಳುತ್ತಿದ್ದ ಜಿಪಂ ಸಿಇಒ ಆನಂದ್ ಪ್ರಸಾದ್ ಮೀನಾ ಅವರಿಗೂ ಪ್ರತಿಭಟನೆಯ ಕಾವು ತಟ್ಟಿತು. ಪ್ರತಿಭಟನಾ ನಿರತರು ಹೋಗಲು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಅವರ ಕಾರನ್ನು ಯೂಟರ್ನ್ ತೆಗೆದುಕೊಂಡು ಹನೂರು ಅಜ್ಜಿಪುರ ರಾಮಪುರ ರಸ್ತೆ ಮಾರ್ಗವಾಗಿ ತೆರಳಿದರು.ಪ್ರತಿಭಟನೆ ಕೈ ಬಿಡುವವರೆಗೆ ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಸಹಾಯಕ ಇಂಜಿನಿಯರ್ ನ್ನು ಪ್ರತಿಭಟನಾನಿರತರು ರಸ್ತೆಯಲ್ಲಿಯೇ ಕೂರಿಸಿದರು.ಬದಲಿ ಮಾರ್ಗ ವ್ಯವಸ್ಥೆ ಮಾಡಿದ ಪೊಲೀಸರು: ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಸಾರಿಗೆ ವಾಹನಗಳು ಹಾಗೂ ವಾಹನ ಸವಾರರಿಗೆ ಎಲ್ಲೇ ಮಾಳ ರಸ್ತೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಿಂದ ಅಜ್ಜಿಪುರ ಮಾರ್ಗವಾಗಿ ತೆರಳುವಂತೆ ಪಟ್ಟಣದ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದರು. ಪ್ರತಿಭಟನೆ ವೇಳೆ ಸೂಕ್ತ ಬಂದೋಬಸ್ತ್ ಕಲ್ಪಿಸಿದರು.ಈ ಸಂದರ್ಭದಲ್ಲಿ ಮಹಾಸಭಾದ ಕೊಳ್ಳೇಗಾಲ ಚಾಮರಾಜು, ಹನೂರು ತಾಲೂಕು ಛಲವಾದಿ ಮಹಾಸಭಾ ಸಮಿತಿ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಚಂಗವಾಡಿ ರಾಜು, ಗೂಳ್ಯ ನಾಗರಾಜು, ಹನೂರು ಪುಟ್ಟರಾಜು, ಪಪಂ ಸದಸ್ಯ ಮಹೇಶ್ ಹಾಗೂ ಮುಖಂಡರಾದ ರಮೇಶ್ ಮಲ್ಲಿಕಾ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.