ಹರಿದು ಬಂದಿತು ಜನಸಾಗರ । ಶೃಂಗೇರಿಯಲ್ಲಿ ವೈಭವದ ಧಸರಾಕ್ಕೆ ಅಧಿಕೃತ ಚಾಲನೆ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶನಿವಾರ ಶರನ್ನವರಾತ್ರಿ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು. ಮಹಾಲಯ ಅಮಾವಾಸ್ಯೆ ದಿನ ಶನಿವಾರ ಬೆಳಿಗ್ಗೆ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನೆರವೇರಿತು. ಮಹಾಭಿಷೇಕದ ನಂತರ ಶೃಂಗೇರಿ ವೈಭವದ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು.
ಮಹಾಲಯ ಅಮಾವಾಸ್ಯೆಯಂದು ಮಹಾಭಿಷೇಕದೊಂದಿಗೆ ಆರಂಭವಾಗುವ ನವರಾತ್ರಿ ಧಾರ್ಮಿಕ ಕಾರ್ಯಕ್ರಮ ಭೂಮಿ ಹುಣ್ಣಿಮೆಯಂದು ಶ್ರೀ ಶಾರದಾಂಬೆ ಮಹಾಭಿಷೇಕದೊಂದಿಗೆ ಅಂದು ತುಂಗಾನದಿಯಲ್ಲಿ ನಡೆಯಲಿರುವ ತೆಪ್ಪೋ ತ್ಸವದೊಂದಿಗೆ ನವರಾತ್ರಿ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.ಅಧಿದೇವತೆ ಶಾರದೆಗೆ ಪಂಚಾಮೃತಭಿಷೇಕದ ನಂತರ ಮೂಲಬಿಂಬದ ಹರಿದ್ರಾ ದರ್ಶನ ನೀರಾಂಜನ, ಮಹಾ ವಿನ್ಯಾಸಪೂರ್ವಕ ಶತರುದ್ರಾಭಿಷೇಕ ನೆರವೇರಿತು. ವಿವಿಧ ಫಲಪುಷ್ಪ, ಪಂಚಾಮೃತಭಿಷೇಕದಿಂದ ಶಾರದೆಯನ್ನು ಸಂಪ್ರೀತಗೊಳಿಸಲಾಯಿತು.108 ಆವರ್ತಿ ಶ್ರೀ ಸೂಕ್ತಪಠಣದಿಂದ ಅಭಿಷೇಕ, ಜಗದ್ಗುರುಗಳ ಸಮ್ಮುಖದಲ್ಲಿ ಮಹಾ ಮಂಗಳಾರತಿ ನೆರವೇರಿತು. ಶಕ್ತಿಗಣಪತಿ ಸನ್ನಿದಿಯಲ್ಲಿ ಶಾರದಾಂಬೆ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ, ನಂತರ ಶ್ರೀ ಶಾರದಾಂಬೆ ಉತ್ಲವ ಮೂರ್ತಿ ಸ್ವರ್ಣರಥದಲ್ಲಿಟ್ಟು ದೇವಾಲಯದ ಪ್ರಾಂಗಣದಲ್ಲಿ ಸುತ್ತು ಭರಿಸಲಾಯಿತು.
ಶಾರದಾಂಬೆಗೆ ಮಹಾಭಿಷೇಕದ ದಿನ ಶನಿವಾರ ಜನವೋ ಜನ. ಬೆಳಿಗ್ಗೆಯಿಂದ ಶ್ರೀ ಶಾರದಾಂಬೆ ಸನ್ನಿದಿ,ಶ್ರೀಮಠದ ಆವರಣದಲ್ಲಿ ಭಕ್ತ ಸಾಗರದಿಂದ ತುಂಬಿತ್ತು. ಮಹಾಭಿಷೇಕದ ತೀರ್ಥಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು .ಜನರ ನೂಕು ನುಗ್ಗಲು ಕಂಡುಬಂದಿತು. ರಾಜ್ಯ,ದೇಶ ನಾನಾ ಕಡೆಗಳಿಂದ ಬಂದಿದ್ದ ಭಕ್ತರಿಂದ ದೇವಾಲಯದ ಆವರಣ ಗಿಜಿಗಿಡುತ್ತಿತ್ತು. ಸರದಿ ಸಾಲಿನಲ್ಲಿ ನಿಂತು ಶಾರದಾಂಬೆ ತೀರ್ಥ ಪಡೆದುಕೊಂಡರು.
ಶಾರದೆಗೆ ಮಹಾಭಿಷೇಕದ ನಂತರ ಜಗತ್ ಪ್ರಸೂತಿಕ ಅಲಂಕಾರದಿಂದ ಸಿಂಗರಿಸಲಾಗಿತ್ತು .ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಠದ ಆವರಣದ ಎಲ್ಲಾ ದೇವಾಲಯಗಳನ್ನು ತಳಿರು ತೋರಣ,ವಿದ್ಯುತ್ ದೀಪಗಳಿಂದ ಸಿಂಗರಿಸ ಲಾಗಿದೆ. ಭಾನುವಾರ ಶಾರದೆಗೆ ಹಂಸವಾಹಿನಿಯಲಂಕಾರ ನಡೆಯಲಿದ್ದು, ಬ್ರಾಹ್ಮಿಯಾಗಿ ಕಂಗೊಳಿಸಲಿದ್ದಾಳೆ.ಶ್ರೀ ಮಠದ ಆವರಣದಲ್ಲಿ ನವರಾತ್ರಿಯ ಸಾಂಸ್ಕ್ರತಿಕ ಮಹೋತ್ಸವದಲ್ಲಿ ವಿದ್ವಾನ್ ಟಿ.ರಾಮ್ ಗೋಪಾಲ್ ಭಾಗವತಾರ್ ತಂಡ ದವರಿಂದ ನಾಮಸಂಕೀರ್ತನೆ ನಡೆಯಲಿದೆ. ಸಂಜೆ ಬೀದಿ ಉತ್ಸವದಲ್ಲಿ ಅಡ್ಡಗೆದ್ದೆ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಕಲಾ ತಂಡಗಳು ಪಾಲ್ಗೊಳ್ಳಲಿವೆ.
10 ಶ್ರೀ ಚಿತ್ರ 2-ಶೃಂಗೇರಿ ವೈಭವದ ದಸರೆಗೆ ಹರಿದು ಬರುತ್ತಿರುವ ಜನಸಾಗರ