ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ, ದೂಪದ ಸೇವೆ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಕನ್ನಡಪ್ರಭ ವಾರ್ತೆ ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನೆರವೇರಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಡೆಯುತ್ತಿರುವ ಮಲೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ದೂಪದ ಸೇವೆ ಬಿಲ್ವಾರ್ಚನೆ ಪಂಚಾಮೃತ ಅಭಿಷೇಕ ಮಹಾಮಂಗಳಾರತಿಯೊಂದಿಗೆ ಬೇಡಗಂಪಣ ಅರ್ಚಕರಿಂದ ನಡೆದ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಉತ್ಸವಗಳು ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹರಕೆ ಹೊತ್ತ ಮಾದಪ್ಪನ ಭಕ್ತರಿಂದ ರುದ್ರಾಕ್ಷಿ ಮಂಟಪೋತ್ಸವ ಹುಲಿ ವಾಹನ ಉತ್ಸವ, ಬಸವ ವಾಹನ ಉತ್ಸವ, ಬೆಳ್ಳಿ ರಥೋತ್ಸವ, ದೂಪದ ಉತ್ಸವ ಹಾಗೂ ಉರುಳು ಸೇವೆ, ಮುಡಿಸೇವೆ ಪಂಚಿನ ಸೇವೆ ಸೇರಿ ಹಲವು ಉತ್ಸವಗಳೊಂದಿಗೆ ಇಷ್ಟಾರ್ಥ ಸಿದ್ಧಿಸುವಂತೆ ಮಾದಪ್ಪನಿಗೆ ಉಘೇ ಉಘೇ ಎಂದು ಜೈಕಾರ ಕೂಗಿದರು. ಸಾರಥಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ಪುನೀತನರಾದರು. ಜನಸ್ತೋಮ ಮಹಾಲಯ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಆಗಮಿಸಿದ್ದರು. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳು, ತಮಿಳುನಾಡಿನಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಮಾದಪ್ಪನ ಭಕ್ತರು ಮಹಾಲಯ ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಎಲ್ಲಿ ನೋಡಿದರೂ ಭಾರಿ ಜನಸ್ತೋಮವೇ ಕಂಡುಬಂದಿತು . ಪಲ್ಲಕ್ಕಿ ಉತ್ಸವ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷವಾಗಿ ಪಲ್ಲಕ್ಕಿ ಉತ್ಸವವನ್ನು ನಡೆಸುವ ಮೂಲಕ ಸಾಲೂರು ಶ್ರೀ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಮಹದೇಶ್ವರ ದರ್ಶನ ಪಡೆದು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೊಂಬು, ಕಹಳೆ ವಾದ್ಯ, ಮೇಳಗಳೊಂದಿಗೆ ಧಾರ್ಮಿಕವಾಗಿ ಪಲ್ಲಕ್ಕಿ ಉತ್ಸವ ದೇವಾಲಯದ ಸುತ್ತಲೂ ಪ್ರದಕ್ಷಣೆ ಹಾಕುವ ಮೂಲಕ ಭಕ್ತರು ಸಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜಗ ಮಗಿಸಿದ ವಿದ್ಯುತ್ ದೀಪಾಲಂಕಾರ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ರಾಜಗೋಪುರ ಹಾಗೂ ಮುಖ್ಯ ದ್ವಾರದ ಗೋಪುರ ಸೇರಿದಂತೆ ದೇವಾಲಯದ ಸುತ್ತಲೂ ಇಂಡಿ ಬಸಪ್ಪ ಸೇರಿದಂತೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ನೆರೆದಿದ್ದ ಮಾದಪ್ಪನ ಭಕ್ತರು ಕಣ್ತುಂಬಿಕೊಂಡರು. ಬಿಗಿ ಬಂದೋಬಸ್ತ್ ಪೊಲೀಸ್ ಇಲಾಖೆ ವತಿಯಿಂದ ಮಹಾಲಯ ಅಮಾವಾಸ್ಯೆ ಪೂಜೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಆಯಾ ಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆಗೊಳಿಸುವ ಮೂಲಕ ಸೂಕ್ತ ಬಂದೋಬಸ್ ಕಲ್ಪಿಸಿ ಬಿಗಿ ಪಹರೆ ಏರ್ಪಡಿಸಲಾಗಿತ್ತು . ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಾದಪ್ಪನ ಭಕ್ತರು ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.